ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸುವ ವೇಳೆ ಭಾರತೀಯ ಉಡುಗೆಯೊಂದಿಗೆ ಅಂಗವಸ್ತ್ರ ಧರಿಸಿ ಬರಬೇಕು, ಮಹಿಳೆಯರು ಸೀರೆಯುಟ್ಟು ಬರಬೇಕು ಎಂದು ತಿಳಿಸಿದ್ದಾರೆ.
ಈ ತಿಂಗಳ ಕೊನೆಯಲ್ಲಿ ದೆಹಲಿ ವಿಶ್ವವಿದ್ಯಾಲಯ ತನ್ನ 99ನೇ ವರ್ಷದ ಘಟಿಕೋತ್ಸವ ಸಮಾರಂಭವನ್ನು ಆಚರಿಸಿಕೊಳ್ಳಲಿದೆ. ದೆಹಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ವಿಕಾಸ್ ಗುಪ್ತಾ ಈ ಕುರಿತಾಗಿ ಮಾಹಿತಿ ನೀಡಿದ್ದು, ಘಟಿಕೋತ್ಸವದ ಡ್ರೆಸ್ ಕೋಡ್‌ಅನ್ನು ಬದಲಿಸಲು ನಾವು ನಿರ್ಧಾರ ಮಾಡಿದ್ದೇವೆ. ಭಾರತೀಯ ಸಂಸ್ಕೃತಿಗೆ ಹೊಂದುವಂತೆ ಉಡುಗೆಯನ್ನು ಧರಿಸಿ ಬರುವಂತೆ ಸೂಚಿಸಲಾಗಿದೆ ಎಂದಿದ್ದಾರೆ.
ದೆಹಲಿ ವಿವಿ ಉಪಕುಲಪತಿ ಯೋಗೇಶ್ ಸಿಂಗ್ ಮಾಹಿತಿ ನೀಡಿದ್ದು, ಇಂಗ್ಲೀಷ್ ಸ್ಟೈಲ್‌ನ ನಿಲುವಂಗಿ ಹಾಗೂ ಅದರ ಮೇಲೆ ಗೌನ್ ಧರಿಸುವ ಸಂಪ್ರದಾಯ ಬಹಳ ಕಾಲದಿಂದಲೂ ಇತ್ತು. ಈಗ ಅದನ್ನು ಬದಲಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ಭಾರತೀಯ ಉಡುಗೆಯೊಂದಿಗೆ ಅಂಗವಸ್ತ್ರಗಳನ್ನು ಧರಿಸುವಂತೆ ಹೇಳಲಾಗಿದೆ. ಅಧಿಕಾರಿಗಳಿಗೆ ಖಾದಿ ರೇಷ್ಮೆಯಿಂದ ತಯಾರಿಸಲಾದ ಉಡುಗೆಗಳನ್ನು ಧರಿಸುವಂತೆ ಹೇಳಲಾಗಿದೆ. ನಮ್ಮ ಮೂಲದ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಇದು ಅಗತ್ಯ ಎಂದುತಿಳಿಸಿದ್ದಾರೆ.
ದೆಹಲಿ ವಿವಿಯಲ್ಲಿ 99ನೇ ಘಟಿಕೋತ್ಸವ (Convocation) ಫೆ.25 ರಂದು ನಡೆಯಲಿದೆ. ಸ್ಪೋರ್ಟ್ಸ್ ಸ್ಟೇಡಿಯಂ ಸಂಕೀರ್ಣದ ಮಲ್ಟಿಪರ್ಪಸ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.ಇದು ಕಡ್ಡಾಯವಲ್ಲದಿದ್ದರೂ, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳಾದ ಕುರ್ತಾ (Kurta) ಮತ್ತು ಸೀರೆಗಳನ್ನು (Saree) ಆಯ್ಕೆ ಮಾಡಲು ಪ್ರೋತ್ಸಾಹಿಸಲಾಗುತ್ತದೆ ಎಂದು ಡಿಯು ಅಧಿಕಾರಿಗಳು ತಿಳಿಸಿದ್ದಾರೆ. ಅಂಗವಸ್ತ್ರಗಳನ್ನು ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳಿಗೆ ಕಲರ್ ಕೋಡೆಡ್ ಮಾಡಲಾಗುತ್ತದೆ.