ಹೊಸದಿಗಂತ ಡಿಜಿಟಲ್ ಡೆಸ್ಕ್:
ನವರಾತ್ರಿಯ ನಾಲ್ಕನೇ ದಿನದಂದು ನವದುರ್ಗೆಯರ ನಾಲ್ಕನೇ ಅವತಾರವಾದ ‘ಮಾತಾ ಕೂಷ್ಮಾಂಡ ದೇವಿ’ಯನ್ನು ಶ್ರದ್ಧಾ-ಭಕ್ತಿಯಿಂದ ಆರಾಧಿಸಲಾಗುತ್ತದೆ. ‘ಕು’ ಎಂದರೆ ಸಣ್ಣ, ‘ಉಷ್ಮ’ ಎಂದರೆ ಕಾವು ಅಥವಾ ಶಕ್ತಿ ಮತ್ತು ‘ಅಂಡ’ ಎಂದರೆ ಬ್ರಹ್ಮಾಂಡ. ತಮ್ಮ ದಿವ್ಯವಾದ ಮುಗುಳುನಗೆಯಿಂದ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಜಗನ್ಮಾತೆ ಈಕೆ. ಇಡೀ ಜಗತ್ತು ಅಂಧಕಾರದಲ್ಲಿದ್ದಾಗ, ಕೂಷ್ಮಾಂಡ ದೇವಿಯು ತನ್ನ ತೇಜಸ್ಸಿನಿಂದ ಬೆಳಕನ್ನು ತಂದಳು ಎಂಬ ಪ್ರತೀತಿ ಇದೆ.
ಆರಾಧನೆಯ ಮಹತ್ವ
ಕೂಷ್ಮಾಂಡ ದೇವಿಯು ಸೂರ್ಯಮಂಡಲದ ಒಳಗೆ ವಾಸಿಸುವ ಸಾಮರ್ಥ್ಯ ಹೊಂದಿದ್ದಾಳೆ. ಅಷ್ಟಭುಜಗಳನ್ನು ಹೊಂದಿರುವ ಈ ದೇವಿ ಕೈಗಳಲ್ಲಿ ಕಮಂಡಲ, ಧನುಸ್ಸು, ಬಾಣ, ಕಮಲ, ಅಮೃತ ಕಲಶ, ಚಕ್ರ ಮತ್ತು ಗದೆಯನ್ನು ಹಿಡಿದಿದ್ದಾಳೆ. ದೇವಿಯ ಆರಾಧನೆಯಿಂದ ಸಕಲ ರೋಗ-ರುಜಿನಗಳು ನಿವಾರಣೆಯಾಗಿ, ಆಯುಷ್ಯ, ಯಶಸ್ಸು, ಬಲ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಮನಸ್ಸಿನ ದ್ವಂದ್ವಗಳು ದೂರವಾಗಿ ಸದಾ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.
ಪೂಜಾ ವಿಧಾನ ಮತ್ತು ನೈವೇದ್ಯ
ಪೂಜೆಯ ದಿನ ಬೇಗ ಎದ್ದು ಮಂಗಳಸ್ನಾನ ಮಾಡಿ, ಶುಚಿಯಾದ ಬಟ್ಟೆ ಧರಿಸಿ. ದೇವಿಯ ವಿಗ್ರಹ ಅಥವಾ ಚಿತ್ರಕ್ಕೆ ಕೆಂಪು ಮತ್ತು ಹಳದಿ ಬಣ್ಣದ ಹೂವುಗಳಿಂದ ಶೃಂಗಾರ ಮಾಡಿ. ಧೂಪ, ದೀಪ ಬೆಳಗಿ ‘ಓಂ ದೇವಿ ಕೂಷ್ಮಾಂಡಾಯೈ ನಮಃ’ ಎಂಬ ಮಂತ್ರವನ್ನು ಜಪಿಸಿ.
ತಾಯಿ ಕೂಷ್ಮಾಂಡಳಿಗೆ ಬೂದು ಕುಂಬಳಕಾಯಿ ಎಂದರೆ ಪ್ರೀತಿ. ಜೊತೆಗೆ ಮಾಲ್ಪುವಾ, ಹಲ್ವಾ ಮತ್ತು ಮೊಸರನ್ನು ನೈವೇದ್ಯವಾಗಿ ಅರ್ಪಿಸಬಹುದು.
ಇಂದಿನ ಶುಭ ಬಣ್ಣ
ನವರಾತ್ರಿಯ ನಾಲ್ಕನೇ ದಿನದಂದು ‘ನೀಲಿ’ ಬಣ್ಣ ಧರಿಸುವುದು ಅತ್ಯಂತ ಶುಭ. ನೀಲಿ ಬಣ್ಣವು ಶಾಂತಿ, ಶಕ್ತಿ, ಮತ್ತು ಸಮೃದ್ಧಿಯ ಸಂಕೇತವಾಗಿದೆ. ಈ ದಿನ ನೀಲಿ ಬಣ್ಣದ ಉಡುಪು ಧರಿಸಿ ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಅಖಂಡ ಶಾಂತಿ ಹಾಗೂ ಆತ್ಮವಿಶ್ವಾಸ ಲಭಿಸುತ್ತದೆ.
ಕೂಷ್ಮಾಂಡ ದೇವಿಯ ದಿವ್ಯ ಆಶೀರ್ವಾದದಿಂದ ಎಲ್ಲರ ಜೀವನದಲ್ಲೂ ಬೆಳಕು, ಆರೋಗ್ಯ ಮತ್ತು ನೆಮ್ಮದಿ ನೆಲೆಸಲಿ.



