October 14, 2026
Wednesday, October 14, 2026
spot_img

WEATHER | ಇಂದು ಒಣಹವೆ, ನಾಳೆ ವರುಣಾರ್ಭಟ: ಆರು ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಸದ್ಯ ಮುಂಗಾರು ಮಾರುತಗಳು ದುರ್ಬಲಗೊಂಡಿದ್ದು, ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮತ್ತು ಬಿಸಿಲಿನ ವಾತಾವರಣ ಮುಂದುವರಿದಿದೆ. ಆದರೆ, ಈ ಒಣಹವೆಯ ನಡುವೆ ಹವಾಮಾನ ಇಲಾಖೆಯು ಸಾರ್ವಜನಿಕರಿಗೆ ತಂಪಿನ ಸುದ್ದಿಯೊಂದನ್ನು ನೀಡಿದೆ. ನಾಳೆಯಿಂದ ರಾಜ್ಯದ ಹವಾಮಾನದಲ್ಲಿ ಪ್ರಮುಖ ಬದಲಾವಣೆಯಾಗಲಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಕೆಲವೆಡೆ ಹಗುರ ಮಳೆ

ಇಂದು ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಮುಖ್ಯವಾಗಿ ಒಣಹವೆಯೇ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ ಸೇರಿದಂತೆ 11 ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಒಣಹವೆ ಮುಂದುವರಿಯಲಿದೆ. ಆದರೆ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಸಾಧಾರಣ ಅಥವಾ ಹಗುರ ಮಳೆಯಾಗುವ ನಿರೀಕ್ಷೆಯಿದೆ.

ಅಕ್ಟೋಬರ್ 15ರ ಗುರುವಾರದಿಂದ ವಾತಾವರಣದಲ್ಲಿ ಬದಲಾವಣೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಚಟುವಟಿಕೆಗಳು ದಿಢೀರ್ ಹೆಚ್ಚಾಗಲಿದ್ದು, ಒಟ್ಟು ಆರು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಿರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಾಮರಾಜನಗರ, ರಾಮನಗರ ಮತ್ತು ಮೈಸೂರು ಜಿಲ್ಲೆಗಳ ಕೆಲವೆಡೆ ಗುಡುಗು ಹಾಗೂ ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ.

ಸಾಧಾರಣ ಮಳೆ ನಿರೀಕ್ಷೆ

ಭಾರೀ ಮಳೆಯ ಮುನ್ಸೂಚನೆ ಇರುವ ಜಿಲ್ಲೆಗಳನ್ನು ಹೊರತುಪಡಿಸಿ, ದಕ್ಷಿಣ ಒಳನಾಡಿನ ಉಳಿದ ಭಾಗಗಳಲ್ಲೂ ಉತ್ತಮ ಮಳೆಯಾಗಲಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳ ಹಲವು ಕಡೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

Must Read