October 14, 2026
Wednesday, October 14, 2026
spot_img

ಇಂದಿನಿಂದ ಆಂಬುಲೆನ್ಸ್‌ ನೌಕರರ ಮುಷ್ಕರ: ಯಾರ ಬ್ಲಾಕ್‌ಮೇಲ್‌ಗೂ ಬಗ್ಗೋದಿಲ್ಲ ಎಂದ ಖಾದರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ಆಂಬುಲೆನ್ಸ್‌ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಬಗ್ಗೆ ಸಚಿವ ಯು.ಟಿ. ಖಾದರ್‌ ಮಾತನಾಡಿದ್ದು, ನಾವು ಯಾರ ಬ್ಲಾಕ್‌ಮೇಲ್‌ಗೂ ಬಗ್ಗೋದಿಲ್ಲ. ರೋಗಿಗಳಿಗೆ ಒಂದಿಷ್ಟು ತೊಂದರೆ ಆದರೂ ಸಹಿಸುವುದಿಲ್ಲ ಎಂದು ಗರಂ ಆಗಿದ್ದಾರೆ. ಇಂದು ರಾತ್ರಿಯಿಂದಲೇ ಆಂಬುಲೆನ್ಸ್‌ ಸೇವೆ ಸ್ಥಗಿತಗೊಳಿಸಿ, ಕರ್ತವ್ಯಕ್ಕೆ ಹಾಜರಾಗದಿರಲು ನೌಕರರು ನಿರ್ಧಾರ ಮಾಡಿದ್ದಾರೆ. ಇದರ ಜೊತೆಗೆ 22ರಂದು ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.

ಬೇಡಿಕೆಗಳೇನು?

ವಾರ್ಷಿಕ ವೇತನದ ಹೆಚ್ಚಳದ ಜೊತೆಗೆ ವೇತನ ಪರಿಷ್ಕರಣೆ ಮಾಡಬೇಕು. ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡುವಂತಾಗಬೇಕು. ಇದಕ್ಕೆ ಬೇಕಾದಷ್ಟು ಆಂಬುಲೆನ್ಸ್‌ಗಳನ್ನು ಒದಗಿಸಬೇಕು. ವಲಯವಾರು ವೇತನ ನಿಗದಿ ವ್ಯವಸ್ಥೆ ರದ್ದುಪಡಿಸಿ ಏಕರೂಪ ವೇತನ ಜಾರಿಯಾಗಬೇಕು. ಜೇಷ್ಠತೆ ಆಧಾರದ ಮೇಲೆ ವೇತನ ನಿರ್ಧಾರವಾಗಬೇಕು. ಕಾರ್ಮಿಕ ಇಲಾಖೆ ನಿಯಮದಂತೆ ತಿಂಗಳ ಏಳನೇ ತಾರೀಖಿನ ಒಳಗೆ ಸಂಬಳ ಬರಬೇಕು. ಆಂಬುಲೆನ್ಸ್‌ ವೇಗವಾಗಿ ಓಡಿಸಲಾಗುತ್ತದೆ. ಹೀಗಾಗಿ ಅಪಘಾತವಾದಲ್ಲಿ ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಸಿಬ್ಬಂದಿಗೆ ವಿಶ್ರಾಂತಿ ಮಾಡಲು ಸ್ಥಳವಿಲ್ಲ, ವಿಶ್ರಾಂತಿಗೆಂದು ಕಟ್ಟಡಗಳನ್ನು ನೀಡಬೇಕು. ಶಿಫ್ಟ್‌ ಸಮಯದಲ್ಲಿ ಬದಲಾವಣೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಬ್ಲಾಕ್‌ಮೇಲ್‌ಗೆ ಬಗ್ಗೋದಿಲ್ಲ

ಈ ಬಗ್ಗೆ ಯು.ಟಿ ಖಾದರ್‌ ಮಾತನಾಡಿ, ಜಿವಿಕೆ ಸಂಸ್ಥೆ ಆಂಬುಲೆನ್ಸ್‌ ನಿರ್ವಹಣೆ ಮಾಡುತ್ತಿದೆ. ಕಂಪನಿಯ ಮುಖ್ಯಸ್ಥರ ಜೊತೆ ಮಾತನಾಡಿದ್ದೇವೆ. ಆದರೂ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಬ್ಲಾಕ್‌ಮೇಲ್‌ಗೆ ಬಗ್ಗೋದಿಲ್ಲ. ರೋಗಿಗಳಿಗೆ ಯಾವುದೇ ತೊಂದರೆ ಆದರೆ ಅದಕ್ಕೆ ಜಿವಿಕೆ ಸಂಸ್ಥೆ ಹೊಣೆಯಾಗಿರುತ್ತದೆ. ಇನ್ನು ರಾಜ್ಯದಲ್ಲಿ 108 ಅಂಬುಲೆನ್ಸ್ ಸೇವೆಯನ್ನೇ ಬಡ ಜನರು ನೆಚ್ಚಿಕೊಂಡಿದ್ದಾರೆ. ಎರಡು ತಿಂಗಳು ಬೇರೆ ವ್ಯವಸ್ಥೆ ಮಾಡಿಕೊಳ್ಳಿ, ನಂತರ ವ್ಯವಸ್ಥೆ ಸರಿಪಡಿಸುತ್ತೇವೆ. ಹೊಸ ಅಂಬುಲೆನ್ಸ್ ಖರೀದಿಸುತ್ತಾ ಇದ್ದೇವೆ. ಹೊಸ ಪಾಲಿಸಿ ಮಾಡುತ್ತೇವೆ. ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸಿಗುವ ರೀತಿ ಮಾಡುತ್ತೇವೆ ಎಂದು ಖಾದರ್ ತಿಳಿಸಿದ್ದಾರೆ.

Must Read