October 14, 2026
Wednesday, October 14, 2026
spot_img

ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ ಮೊದಲು ರಾಜೀನಾಮೆ ಕೊಡಿ: ಸಿ.ಟಿ. ರವಿ

ಹೊಸದಿಗಂತ ವರದಿ ಕಲಬುರಗಿ:

ದೇಶದ ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲ ಎಂದು ಆರೋಪಿಸುವ ಕಾಂಗ್ರೆಸ್ ನಾಯಕರು, ಮೊದಲು ತಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜೀನಾಮೆ ನೀಡಲಿ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಸವಾಲು ಹಾಕಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಚುನಾವಣಾ ಆಯೋಗದ ಮೇಲೆ ಭರವಸೆ ಇಲ್ಲದಿದ್ದರೆ ಮೊದಲು ಆ ರಾಜ್ಯಗಳಲ್ಲಿ ರಾಜೀನಾಮೆ ನೀಡಿ. ಆನಂತರ ಆಯೋಗ ಸರಿಯಿಲ್ಲ ಎಂದು ಹೇಳಲಿ ಎಂದು ಟೀಕಿಸಿದರು.

ಇವಿಎಂಗಳು ಸರಿಯಿಲ್ಲ ಎಂದು ಆರೋಪಿಸುವ ಕಾಂಗ್ರೆಸ್ ನಾಯಕರು,ತಮ್ಮ ಪಕ್ಷದ ಗೆಲುವುಗಳೂ ಅಕ್ರಮ ಎಂದು ಒಪ್ಪಿಕೊಂಡು ಮೊದಲು ರಾಜೀನಾಮೆ ನೀಡಲಿ. ನಂತರ ಬೇಕಾದರೆ ಚುನಾವಣಾ ಆಯೋಗದ ಮುಖ್ಯಸ್ಥರ ರಾಜೀನಾಮೆ ಕೇಳಲಿ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲದಿದ್ದರೆ, ಅವರಿಗೆ ಸಂವಿಧಾನದ ಮೇಲೆಯೇ ನಂಬಿಕೆ ಇಲ್ಲ ಎಂದಂತಾಗುತ್ತದೆ. ಇದರಿಂದ ಕಾಂಗ್ರೆಸ್ ನಾಯಕರ ಬೂಟಾಟಿಕೆ ಬಯಲಾಗುತ್ತದೆ ಎಂದು ಆರೋಪಿಸಿದರು.

ರಾಜಕೀಯ ಹಿತಾಸಕ್ತಿಗಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕೆಲಸ ಮಾಡಬಾರದು. ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುವ ಮೊದಲು ಕಾಂಗ್ರೆಸ್ ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

Must Read