ಹೊಸದಿಗಂತ ವರದಿ ಮಂಡ್ಯ:
ಕಲುಷಿತ ನೀರನ್ನು ಸೇವಿಸಿದ ಇಬ್ಬರು ಮಕ್ಕಳು ಸೇರಿದಂತೆ 26 ಕ್ಕೂ ಹೆಚ್ಚು ಮಂದಿ ಕಬ್ಬು ಕಡಿಯುವ ಕೂಲಿ ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ಮದ್ದೂರು ತಾಲೂಕು ಮಾದರಹಳ್ಳಿ ಬಳಿ ನಡೆದಿದೆ.
ಮಹಾರಾಷ್ಟ್ರ ಮೂಲದವರಾದ ಅನಿಲ್ (30), ರೋಹಿತ್ (19), ಮುಖೇಶ್ (35), ವಿಕಾಸ್ (21), ಅರ್ಜುನ್ ಜಾದವ್ (25), ಮನಿಷಾ ಗಾಯಕ್ವಾಡ್ (28), ಸಂಗೀತಾ ಜಾದವ್ (30), ರುಕ್ಮಾಬಾಯಿ (50), ಲಕ್ಷ್ಮಿ (30), ವೈಷ್ಣವಿ (18), ಅಕ್ಕಾ ಪವರ್ (40), ರೇಣುಕಾ (30) ಸೇರಿದಂತೆ 26ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಮಾದರಹಳ್ಳಿ ಸುತ್ತಮುತ್ತ ಕಬ್ಬು ಕಡಿಯಲು ಆಗಮಿಸಿದ್ದ ಕೂಲಿ ಕಾರ್ಮಿಕರು ಮಾದರಹಳ್ಳಿ ಸಮೀಪದ ಕಬ್ಬಿನ ಗದ್ದೆ ಬಳಿ ಟೆಂಟ್ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಊಟ ಮಾಡಿದ ನಂತರ ಎಲ್ಲರಿಗೂ ವಾಂತಿ, ಕೆಮ್ಮ, ಉಸಿರಾಟದ ತೊಂದರೆಯಿಂದ ಬಳಲುವಂತಾಗಿತ್ತು. ತಕ್ಷಣ ಅವರನ್ನು ಮಿಮ್ಸ್ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು.



