ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಮತ್ತು ದಕ್ಷಿಣ ಭಾರತದ ಪ್ರತಿಭಾವಂತ ನಟಿ ಮೃಣಾಲ್ ಠಾಕೂರ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾಗಳ ಯಶಸ್ಸಿನ ಬಗ್ಗೆ ಹೊಸ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಈ ವರ್ಷ ತೆರೆಕಂಡ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಕೇವಲ ಥಿಯೇಟರ್ ಗಳಿಕೆಯಿಂದ ಮಾತ್ರ ಚಿತ್ರದ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ಮನಸ್ಥಿತಿ ಬದಲಾಗಿದೆ. ಸಿನಿಮಾದ ಯಶಸ್ಸಿಗೆ ಮಾಧ್ಯಮ ಮುಖ್ಯವಲ್ಲ, ಕಥೆ, ಪಾತ್ರಗಳು ಮತ್ತು ಅದರ ಹಿಂದಿನ ಆಶಯ ಜನರನ್ನು ತಲುಪುತ್ತಿದೆಯೇ ಎಂಬುದು ಮುಖ್ಯ ಎಂದು ಮೃಣಾಲ್ ವಾದಿಸುತ್ತಾರೆ. ‘ಪೂಜಾ ಮೇರಿ ಜಾನ್’ ಚಿತ್ರವು ಒಟಿಟಿಯಲ್ಲಿ ಉತ್ತಮ ಮೆಚ್ಚುಗೆ ಗಳಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದಿದ್ದಾರೆ.
ಚಿತ್ರಮಂದಿರಗಳಲ್ಲಿ ಸೋತ ಅನೇಕ ಚಿತ್ರಗಳು ಒಟಿಟಿಗೆ ಬಂದ ನಂತರ ಹೊಸ ಮನ್ನಣೆ ಪಡೆಯುತ್ತವೆ ಎಂಬುದಕ್ಕೆ ‘ಲಾಪತಾ ಲೇಡೀಸ್’ ಚಿತ್ರವನ್ನು ಅವರು ಉದಾಹರಣೆಯಾಗಿ ನೀಡಿದ್ದಾರೆ. ಥಿಯೇಟರ್ನಲ್ಲಿ ಬಿಡುಗಡೆಯಾದಾಗ ಜನ ಗಮನಿಸದಿದ್ದರೂ, ಒಟಿಟಿಯಲ್ಲಿ ಬಂದಾಗ ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದರು. ಅಂತೆಯೇ, ‘ಡಕಾಯತ್’ ಚಿತ್ರದ ಸಂದರ್ಭದಲ್ಲೂ ಹಲವರು ದೊಡ್ಡ ಪರದೆಯಲ್ಲಿ ನೋಡಲಿಲ್ಲ ಎಂದು ಮೃಣಾಲ್ ನೆನಪಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ನಕಾರಾತ್ಮಕ ಟೀಕೆಗಳ ಬಗ್ಗೆ ಮಾತನಾಡಿದ ಅವರು, ಪ್ರೊಫೈಲ್ ಪಿಕ್ಚರ್ ಕೂಡ ಇಲ್ಲದವರಿಂದ ಬರುವ ನೆಗೆಟಿವ್ ಕಮೆಂಟ್ಗಳನ್ನು ತಾನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ಬದಲಾಗಿ, ಪ್ರೇಕ್ಷಕರಿಂದ ಬರುವ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಸ್ವೀಕರಿಸಿ ಕಲಿಯುತ್ತಿದ್ದೇನೆ ಎಂದು ನಯವಾಗಿ ತಿಳಿಸಿದ್ದಾರೆ.
‘ಪೂಜಾ ಮೇರಿ ಜಾನ್’ ಚಿತ್ರವು ಪ್ರೇಕ್ಷಕರ ಮನ ಮುಟ್ಟಿದೆ. ವೀಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಪುಟಗಟ್ಟಲೆ ಕೈಬರಹದ ಪತ್ರಗಳನ್ನು ಮೃಣಾಲ್ ಅವರ ಮನೆಗೆ ಕಳುಹಿಸಿದ್ದಾರೆ. ವಿಶೇಷವಾಗಿ ಈ ಚಿತ್ರವು ಕೇವಲ ಯುವತಿಯರಷ್ಟೇ ಅಲ್ಲದೆ, ಪುರುಷರ ಮನಸ್ಸನ್ನು ಕೂಡ ಆಳವಾಗಿ ತಲುಪಿದ್ದು ತಮಗೆ ಸಿಕ್ಕ ದೊಡ್ಡ ಮನ್ನಣೆ ಎಂದು ನಟಿ ಖುಷಿ ವ್ಯಕ್ತಪಡಿಸಿದ್ದಾರೆ.



