ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ನೋಡುತ್ತಾ ಅಡುಗೆ ಮಾಡುವುದು, ಆಫೀಸ್ ಮೀಟಿಂಗ್ನಲ್ಲಿದ್ದುಕೊಂಡೇ ವಾಟ್ಸಾಪ್ ಮೆಸೇಜ್ ಮಾಡುವುದು, ಅಥವಾ ಟಿವಿ ನೋಡುತ್ತಾ ಓದುವುದು ಸಾಮಾನ್ಯವಾಗಿದೆ. ಇದನ್ನು ನಾವು ‘ಮಲ್ಟಿಟಾಸ್ಕಿಂಗ್’ ಎಂದು ಹೆಮ್ಮೆಯಿಂದ ಕರೆಯುತ್ತೇವೆ. ಆದರೆ ನರರೋಗ ತಜ್ಞರ ಪ್ರಕಾರ, ನಮ್ಮ ಮೆದುಳು ಒಂದೇ ಸಮಯದಲ್ಲಿ ಎರಡು ಸಂಕೀರ್ಣ ಕೆಲಸಗಳನ್ನು ಮಾಡಲು ವಿನ್ಯಾಸಗೊಂಡಿಲ್ಲ. ನಾವು ಮಲ್ಟಿಟಾಸ್ಕಿಂಗ್ ಮಾಡುತ್ತಿದ್ದೇವೆ ಅಂದುಕೊಂಡಾಗ, ವಾಸ್ತವದಲ್ಲಿ ಮೆದುಳು ಒಂದು ಕೆಲಸದಿಂದ ಇನ್ನೊಂದಕ್ಕೆ ಅತಿ ವೇಗವಾಗಿ ಜಿಗಿಯುತ್ತಿರುತ್ತದೆ ಅಷ್ಟೇ.
ಮಲ್ಟಿಟಾಸ್ಕಿಂಗ್ ಪ್ರಾಬ್ಲಮ್
ಪದೇ ಪದೇ ಗಮನ ಬದಲಾಯಿಸುವುದರಿಂದ ಮೆದುಳು ಬೇಗನೆ ಸುಸ್ತಾಗುತ್ತದೆ. ಇದರಿಂದಾಗಿ ಯಾವುದೋ ಒಂದರ ಮೇಲೆ ದೀರ್ಘಕಾಲ ಗಮನ ಹರಿಸಲು ಸಾಧ್ಯವಾಗುವುದಿಲ್ಲ.
ಹೊಸ ಮಾಹಿತಿಯನ್ನು ದೀರ್ಘಕಾಲದ ನೆನಪಾಗಿ ಸಂಗ್ರಹಿಸುವ ಮೆದುಳಿನ ಸಾಮರ್ಥ್ಯ ಕಡಿಮೆಯಾಗುತ್ತದೆ.
ಮಲ್ಟಿಟಾಸ್ಕಿಂಗ್ ಮಾಡುವಾಗ ಮೆದುಳಿನಲ್ಲಿ ‘ಕಾರ್ಟಿಸೋಲ್’ ಎಂಬ ಒತ್ತಡದ ಹಾರ್ಮೋನ್ ಬಿಡುಗಡೆಯಾಗುತ್ತೆ. ಇದು ಮಾನಸಿಕ ಆತಂಕಕ್ಕೆ ಕಾರಣವಾಗುತ್ತದೆ.
ಕೆಲಸಗಳನ್ನು ವೇಗವಾಗಿ ಮುಗಿಸುವ ಭರದಲ್ಲಿ ಕೆಲಸದ ಗುಣಮಟ್ಟ ಹಾಳಾಗುತ್ತದೆ ಮತ್ತು ಸಣ್ಣಪುಟ್ಟ ತಪ್ಪುಗಳು ಹೆಚ್ಚಾಗುತ್ತವೆ.
ಯಾವ ಕೆಲಸಕ್ಕೆ ಗಮನ ನೀಡಬೇಕು?
ಎಲ್ಲಾ ಕೆಲಸಗಳಿಗೂ ಒಂದೇ ರೀತಿಯ ಶ್ರಮ ಬೇಕಿರುವುದಿಲ್ಲ. ಆದರೆ ಕೆಳಗಿನ ಸನ್ನಿವೇಶಗಳಲ್ಲಿ ನಿಮ್ಮ ಕೆಲಸಕ್ಕೆ ನೂರು ಪ್ರತಿಶತ ಪೂರ್ಣ ಗಮನ ನೀಡುವುದು ಅತ್ಯಗತ್ಯ.
ಹೊಸ ಯೋಜನೆಗಳನ್ನು ರೂಪಿಸುವಾಗ, ಗಣಿತ ಅಥವಾ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಾಗ ಮತ್ತು ಪರೀಕ್ಷೆಗೆ ಓದುವಾಗ.
ವಾಹನ ಚಾಲನೆ ಮಾಡುವಾಗ, ಯಂತ್ರಗಳನ್ನು ಬಳಸುವಾಗ ಮತ್ತು ಮಗುವಿನ ಆರೈಕೆ ಮಾಡುವಾಗ ಸಂಪೂರ್ಣ ಗಮನವಿರಬೇಕು.
ಕುಟುಂಬ, ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಪ್ರಮುಖ ವಿಷಯ ಚರ್ಚಿಸುವಾಗ ಮೊಬೈಲ್ ಬದಿಗಿಟ್ಟು ಗಮನಕೊಡುವುದು ಉತ್ತಮ ಸಂಬಂಧಕ್ಕೆ ದಾರಿಯಾಗುತ್ತದೆ.
ಹಣಕಾಸಿನ ಹೂಡಿಕೆ ಅಥವಾ ಜೀವನದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಅರ್ಧಂಬರ್ಧ ಗಮನ ಅಪಾಯಕಾರಿ.
ಒಂದೇ ಬಾರಿಗೆ ನೂರು ಹೆಜ್ಜೆ ಇಡುವ ಬದಲು, ಸರಿಯಾದ ದಿಕ್ಕಿನಲ್ಲಿ ಇಡುವ ಒಂದೇ ಹೆಜ್ಜೆ ಬಹಳ ಮುಖ್ಯ. ಮಲ್ಟಿಟಾಸ್ಕಿಂಗ್ ಬಿಟ್ಟು, ‘ಸಿಂಗಲ್ ಟಾಸ್ಕಿಂಗ್’ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಮೆದುಳು ಚುರುಕಾಗಿರುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.



