ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ನಡೆಯುವ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ಜನ ಹಾಸನಾಂಬೆಯ ದರುಶನಕ್ಕಾಗಿ ಆಗಮಿಸುತ್ತಾರೆ. ಹೂವುಗಳಲ್ಲಿ ಅಲಂಕೃತಗೊಂಡಿರುವ ದೇವಸ್ಥಾನವನ್ನು ಕಣ್ತುಂಬಿಕೊಳ್ಳುವುದೇ ಜನರಿಗೆ ಒಂದು ಸಂಭ್ರಮವಿದ್ದಂತೆ.
ಹಾಸನಾಂಬ ಜಾತ್ರೆಯಲ್ಲಿ ಹೂವಿನ ಅಲಂಕಾರಕ್ಕೆ ಬರೋಬ್ಬರಿ 90 ಲಕ್ಷ ರೂಪಾಯಿ ಖರ್ಚು ಆಗಿದೆಯಂತೆ! ಬರೀ ಹೂವಿಗೆ ಇಷ್ಟೊಂದು ಹಣ ಖರ್ಚಾಗಿದೆಯಾ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೂವಿಗೆ ಅಷ್ಟು ಲಕ್ಷ ಖರ್ಚಾಗಿದೆ, ಡ್ಯಾನ್ಸ್ ಕಾರ್ಯಕ್ರಮಕ್ಕೆ 80 ಲಕ್ಷ ರೂ. ಹಾಗೂ ಕಂಟ್ರೋಲ್ ರೂಂಗೆ 50 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ ಇದರ ಜೊತೆಗೆ ಸಿಎಂ ಹಾಗೂ ಡಿಸಿಎಂ ಬಂದು ಹೋಗಲು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಗರಂ ಆಗಿದ್ದಾರೆ.
ಅಕ್ಟೋಬರ್ 29ರಿಂದ ನವೆಂಬರ್ 11ರ ವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಬಾರಿಯ ಜಾತ್ರೆಯ ಖರ್ಚು ವೆಚ್ಚಗಳ ಕುರಿತು ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಜಿಲ್ಲಾಡಳಿತದ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಕ್ತಾದಿಗಳಿಗೆ ಹೂವಿನ ಅಲಂಕಾರ ಮಾಡಬೇಕು ಎಂದು ಹೇಳಿದ್ದರೆ ಸಾಕಿತ್ತು, ಅವರೇ ರಾಶಿ ರಾಶಿ ಹೂವುಗಳನ್ನು ತಂದು ಕೊಡುತ್ತಿದ್ದರು. ಬರಗಾಲ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ಅವಶ್ಯಕವೇ? ಜಿಲ್ಲಾಡಳಿತಕ್ಕೆ ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ಕಂಟ್ರೋಲ್ ರೂಂಗೆ 50 ಲಕ್ಷ ರೂ. ಮೀಸಲಿಟ್ಟಿರುವುದಕ್ಕೂ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೆಚ್ಚದ ಬಗ್ಗೆ ಸಚಿವರೇ ತಲೆ ಚಚ್ಚಿಕೊಳ್ಳುತ್ತಿದ್ದರು. ಹಾಗಾದರೆ ಸಚಿವರ ಮಾತಿಗೆ ಬೆಲೆ ಇಲ್ಲದಂತಾಯಿತು. ಡಾನ್ಸ್ ಕಾರ್ಯಕ್ರಮಕ್ಕೆ 80 ಲಕ್ಷ ಅಂತಿದ್ದಾರೆ. ಜನ ದೇವರನ್ನು ನೋಡಲು ಬರುತ್ತಾರೆ, ಅಲಂಕಾರ ನೋಡಲು ಅಲ್ಲ. ಭಕ್ತಿಯನ್ನು ಅವರವರ ಪ್ರೆಸ್ಟೀಜ್ಗೆ ತಕ್ಕ ಹಾಗೆ ಬದಲಾಯಿಸಲಾಗುತ್ತಿದೆ ಎಂದಿದ್ದಾರೆ.



