ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ ಆರು ತಿಂಗಳ ನಂತರ ಚಿಕ್ಕಬಳ್ಳಾಪುರದ ಸ್ಕಂದಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ಗೆ ಮತ್ತೆ ಅವಕಾಶ ನೀಡಲಾಗಿದೆ. ಆದರೆ ವೀಕೆಂಡ್ನಲ್ಲಿ ಟ್ರೆಕ್ಕಿಂಗ್ ಫೀಸ್ ದುಬಾರಿಯಾಗಿದ್ದು, ಚಾರಣಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಟ್ರೆಕ್ಕಿಂಗ್ ಶುಲ್ಕ ಒಬ್ಬರಿಗೆ 250 ರೂಪಾಯಿ ಇದೆ. ವೀಕೆಂಡ್ನಲ್ಲಿ ಈ ಹಣ ಡಬಲ್ ಆಗಿದೆ. ಅಂದರೆ ಶನಿವಾರ ಹಾಗೂ ಭಾನುವಾರ ಪ್ರತಿ ವ್ಯಕ್ತಿಗೆ 500 ರೂಪಾಯಿ ಶುಲ್ಕ ನಿಗದಿಮಾಡಲಾಗಿದೆ. ಇದರಿಂದಾಗಿ ಚಾರಣಪ್ರಿಯರು ಗರಂ ಆಗಿದ್ದಾರೆ.
ಚಾರಣಿಗರ ದೂರೇನು?
ವಾರವಿಡೀ ದುಡಿದು ವೀಕೆಂಡ್ನಲ್ಲಿ ನಿಸರ್ಗದ ಮಧ್ಯೆ ಇರುವುದಕ್ಕಾಗಿ ಟ್ರೆಕ್ಕಿಂಗ್ ಹೋಗಲು ಇಷ್ಟಪಡುತ್ತೀವಿ. ಆದರೆ ವೀಕೆಂಡ್ನ ಶುಲ್ಕ ನಮ್ಮನ್ನು ತಡೆಯುತ್ತಿದೆ. ಒಬ್ಬೊಬ್ಬರಿಗೆ 500 ರೂಪಾಯಿ ತುಂಬಾ ದುಬಾರಿಯಾಯ್ತು ಎಂದು ಚಾರಣಿಗರು ದೂರಿದ್ದಾರೆ. ಇಷ್ಟೆಲ್ಲಾ ಹಣ ಕೊಟ್ಟು ಹೋಗುತ್ತೇವೆ ಎಂದರೂ ಟ್ರೆಕ್ಕಿಂಗ್ ರಸ್ತೆ ಹೇಗಿದೆ ನೋಡಿದ್ದೀರಾ? ಶೋಚನೀಯ ಸ್ಥಿತಿ ಇದೆ. ಪರಿಸರ ಸ್ನೇಹಿ ವಾಹನಗಳು, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಒಂದು ಶೌಚಾಲಯವೂ ಇಲ್ಲ. ಒಂದು ಕುಟುಂಬದಲ್ಲಿ ಆರು ಮಂದಿ ಬಂದರೆ ಮೂರು ಸಾವಿರ ರೂಪಾಯಿ ಶುಲ್ಕವಾಗುತ್ತದೆ. ಗ್ರೂಪ್ಗೆ ಡಿಸ್ಕೌಂಟ್ ನೀಡಬೇಕಿತ್ತು ಎಂದು ಹೇಳಿದ್ದಾರೆ.
ಅಧಿಕಾರಿಗಳು ಹೇಳೋದೇನು?
ಸ್ಕಂದಗಿರಿ ಬೆಟ್ಟದಲ್ಲಿ ಸರಣಿ ಅಹಿತಕರ ಘಟನೆಗಳು ನಡೆದಿತ್ತು. ಹೀಗಾಗಿ ಆರು ತಿಂಗಳಿನಿಂದ ಇಲ್ಲಿ ಟ್ರೆಕ್ಕಿಂಗ್ ನಿಷೇಧ ಮಾಡಲಾಗಿತ್ತು. ಇದೀಗ ಮತ್ತೆ ಟ್ರೆಕ್ಕಿಂಗ್ಗೆ ಅವಕಾಶ ನೀಡಿದ್ದೇವೆ. ವೀಕೆಂಡ್ನಲ್ಲಿ ತುಂಬಾ ಜನ ಬರುತ್ತಾರೆ. ಜನರನ್ನು ನಿಯಂತ್ರಣ ಮಾಡಲು ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ. ಶುಲ್ಕ ಹೆಚ್ಚಿದ್ದಲ್ಲಿ ಎಲ್ಲರೂ ಇಲ್ಲಿಗೆ ಬರೋದಕ್ಕೆ ಇಷ್ಟಪಡುವುದಿಲ್ಲ. ವಾರಾಂತ್ಯದ ಜನದಟ್ಟಣೆ ನಿಯಂತ್ರಣ ಮಡಲು ಈ ರೀತಿ ಮಾಡಬೇಕಾಗಿದೆ ಎಂದಿದ್ದಾರೆ.
ಹೊಸ ವ್ಯವಸ್ಥೆಗಳೇನು?
ಸ್ಕಂದಗಿರಿ ಬೆಟ್ಟದಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯ. ನೆಟ್ವರ್ಕ್ ಲಭ್ಯವಿರುವ ಜಾಗಗಳನ್ನು ಗುರುತಿಸುವುದು ಹಾಗೂ ನಿಯಂತ್ರಣ ಕೇಂದ್ರ ಸ್ಥಾಪನೆಯಾಗಿದೆ. ಪ್ರತಿ 10 ಚಾರಣಿಗರಿಗೆ ಒಬ್ಬ ಮಾರ್ಗದರ್ಶಿಯನ್ನು ನಿಯೋಜಿಸಲಾಗುತ್ತದೆ. ಗುಂಪಿನಲ್ಲಿರುವ ಎಲ್ಲರ ಸಂಪರ್ಕ ವಿವರಗಳು ಮಾರ್ಗದರ್ಶಿಯ ಬಳಿ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



