October 15, 2026
Thursday, October 15, 2026
spot_img

ಅಮೆರಿಕನ್ ಪಾಸ್‌ಪೋರ್ಟ್ ಜಂಜಾಟ: ಭಾರತ ತೊರೆಯುವಂತೆ ನಟ ಇಮ್ರಾನ್ ಖಾನ್‌ಗೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಖ್ಯಾತ ನಟ ಅಮೀರ್ ಖಾನ್ ಅವರ ಅಳಿಯ ಹಾಗೂ ನಟ ಇಮ್ರಾನ್ ಖಾನ್‌ಗೆ ದೊಡ್ಡ ಕಾನೂನು ಸಂಕಷ್ಟ ಎದುರಾಗಿದೆ. ವಿದೇಶಿ ಪ್ರಜೆಯಾಗಿದ್ದುಕೊಂಡು ಭಾರತದ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ ಮೇಲೆ, ವಿದೇಶಿ ಪ್ರಜೆಗಳ ನೋಂದಣಿ ಕಚೇರಿ ಇಮ್ರಾನ್ ಖಾನ್ ಅವರಿಗೆ ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ.

ಅಕ್ಟೋಬರ್ 10ರಂದು ಮುಂಬೈ ಸೆಂಟ್ರಲ್‌ನಲ್ಲಿರುವ ಐತಿಹಾಸಿಕ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಆಗ್ರಹಿಸಿ ನಡೆದ ಈ ಪ್ರತಿಭಟನೆಯಲ್ಲಿ ನಟ ಇಮ್ರಾನ್ ಖಾನ್, ಅವರ ಗೆಳತಿ ಲೆಖಾ ವಾಷಿಂಗ್ಟನ್ ಹಾಗೂ ಕುಟುಂಬದವರು ಪಾಲ್ಗೊಂಡಿದ್ದರು. ಈ ವೇಳೆ ಪೊಲೀಸರು ಇವರನ್ನು ಇತರ 400 ಜನರೊಂದಿಗೆ ವಶಕ್ಕೆ ಪಡೆದಿದ್ದರು.

ಅಮೆರಿಕದ ಪಾಸ್‌ಪೋರ್ಟ್ ಮತ್ತು ಓಸಿಐ ಕಾರ್ಡ್ ಹೊಂದಿರುವ ಇಮ್ರಾನ್ ಖಾನ್, ಭಾರತದಲ್ಲಿ ನೆಲೆಸಿ ಸರ್ಕಾರದ ವಿರುದ್ಧ ನಡೆಯುವ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಕಾನೂನುಬಾಹಿರ ಎಂದು ಬಿಜೆಪಿ ಹಿರಿಯ ನಾಯಕ ಕಿರಿತ್ ಸೋಮಯ್ಯ ಅವರು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿದೇಶಿ ಪ್ರಜೆಗಳು ಇಂತಹ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ವಿರುದ್ಧ ಸ್ಪಷ್ಟ ನಿಯಮಗಳಿದ್ದು, ಇದರ ಆಧಾರದ ಮೇಲೆಯೇ ಎಫ್‌ಆರ್‌ಆರ್‌ಒ ಈ ಕಠಿಣ ಕ್ರಮ ಕೈಗೊಂಡಿದೆ.

ಪ್ರತಿಭಟನೆ ವೇಳೆ ಮಾತನಾಡಿದ್ದ ಇಮ್ರಾನ್ ಖಾನ್, ತಾನು ಯಾವುದೇ ನಿರ್ದಿಷ್ಟ ಬೇಡಿಕೆಗಳೊಂದಿಗೆ ಬಂದಿಲ್ಲ ಬದಲಿಗೆ ಈ ನಗರದಲ್ಲಿ ವಾಸಿಸುವ ಓರ್ವ ಸಾಮಾನ್ಯ ನಾಗರಿಕನಾಗಿ ಬಂದಿದ್ದೇನೆ ಎಂದಿದ್ದರು. ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾಕೆ ಮೊಟಕುಗೊಳಿಸಲಾಗುತ್ತಿದೆ ಎಂಬುದನ್ನು ತಿಳಿಯಲು ತಾವು ಬಂದಿರುವುದಾಗಿ ಸಮರ್ಥನೆ ನೀಡಿದ್ದರು. ಒಟ್ಟಿನಲ್ಲಿ, ಒಸಿಐ ಕಾರ್ಡ್ ನಿಯಮಗಳ ಉಲ್ಲಂಘನೆ ಪ್ರಕರಣವು ಈಗ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Must Read