October 15, 2026
Thursday, October 15, 2026
spot_img

ಮೈಸೂರು ಅರಮನೆಯ ಐತಿಹಾಸಿಕ ವಜ್ರಮುಷ್ಟಿ ಕಾಳಗಕ್ಕೆ ಚನ್ನಪಟ್ಟಣದ ತೇಜಸ್ ತಾಲೀಮು

  • ಎಸ್. ರುದ್ರೇಶ್ವರ

    ರಾಮನಗರ : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಈ ಬಾರಿ ಚನ್ನಪಟ್ಟಣದ ಜಟ್ಟಿ ತೇಜಸ್ ಎದುರಾಳಿಯ ರಕ್ತ ಚಿಮ್ಮಿಸಲು ಸಿದ್ದರಾಗಿದ್ದಾರೆ. ವಿಜಯದಶಮಿಯ ದಿನ ನಡೆಯುವ ಜಂಬೂ ಸವಾರಿಗೂ ಮುನ್ನ ಅರಮನೆ ಆವರಣದಲ್ಲಿ ಹಲವು ಸಂಪ್ರದಾಯಗಳು ನಡೆಯುತ್ತವೆ. ಅದರಲ್ಲಿ ಈ ವಜ್ರಮುಷ್ಠಿ ಕಾಳಗವು ಒಂದಾಗಿದೆ.

ವಿಜಯದಶಮಿಯ ದಿನ ರಾಜವಂಶಸ್ಥರು ವಿಜಯ ಯಾತ್ರೆಗೆ ಹೋಗುವ ಮುನ್ನ ಅರಮನೆಯ ಕನ್ನಡಿ ತೊಟ್ಟಿ (ಕರಿಕಲ್ಲು ತೊಟ್ಟಿ)ಯಲ್ಲಿ ಜಟ್ಟಿಗಳಿಂದ ಆಯೋಜಿಸುವ ಜಟ್ಟಿ ಕಾಳಗ ಅಥವಾ ವಜ್ರಮುಷ್ಟಿ ಕಾಳಗಕ್ಕೆ ತನ್ನದೇ ಆದ ವೈಶಿಷ್ಟ್ಯ ಹಾಗೂ ಇತಿಹಾಸವಿದೆ. ಹಲವು ವರ್ಷಗಳಿಂದ ಈ ಕಾಳಗವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಜಟ್ಟಿ ಕಾಳಗದಲ್ಲಿ ರಕ್ತ ಚಿಮ್ಮಿದ ನಂತರವೇ ಜಂಬೂಸವಾರಿ ಹೊರಡುವುದು ಈ ಕಾಳಗದ ಮಹತ್ವಕ್ಕೆ ಸಾಕ್ಷಿಯಾಗಿದೆ. ಎರಡು ಜೋಡಿ ಜಟ್ಟಿಗಳು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದು, ರಾಜವಂಶಸ್ಥರ ಎದುರು ಕಾಳಗ ನಡೆಸುತ್ತಾರೆ. ಈ ಹಿಂದಿನಿಂದಲೂ ಜಟ್ಟಿ ಜನಾಂಗದವರು ಈ ವಜ್ರಮುಷ್ಟಿ ಕಾಳಗ ನಡೆಸಿಕೊಂಡು ಬರುತ್ತಿದ್ದಾರೆ.

ಮೈಸೂರು, ಚಾಮರಾಜನಗರ, ಬೆಂಗಳೂರು ಹಾಗೂ ಚನ್ನಪಟ್ಟಣದಿಂದ ತಲಾ ಒಬ್ಬ ಜಟ್ಟಿಯನ್ನು ಆಯ್ಕೆ ಮಾಡಲಾಗುತ್ತದೆ. ಕಾದಾಡಬೇಕಾದ ಜಟ್ಟಿಗಳ ಜೋಡಿಯನ್ನು ಮೊದಲೇ ಆಯ್ಕೆ ಮಾಡಲಾಗುತ್ತದೆ. ಬಳಿಕ ವಜ್ರಮುಷ್ಟಿಒ ಕಾಳಗ ರಾಜ ಪರಂಪರೆಯಂತೆ ಸಾಗುತ್ತದೆ. ಎರಡು ಜೋಡಿ ಜಟ್ಟಿಗಳು ತಮ್ಮ ಕೈ ಬೆರಳುಗಳಲ್ಲಿ ಧರಿಸಿದ ಆಯುಧ (ವಜ್ರಮುಷ್ಟಿ)ಯಿಂದ ಕಾದಾಟ ನಡೆಸುತ್ತಾರೆ. ಎದುರಾಳಿಯ ತಲೆಯಿಂದ ರಕ್ತ ಚಿಮ್ಮಿದಾಗ ಕಾಳಗ ಕೊನೆಗೊಳ್ಳುತ್ತದೆ.

ವಜ್ರಮುಷ್ಟಿ ಕಾಳಗದಲ್ಲಿ ಈ ಬಾರಿ ಚನ್ನಪಟ್ಟಣವನ್ನು ತೇಜಸ್ ಎಂಬ ಜಟ್ಟಿ ಪ್ರತಿನಿಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಾಳಗದಲ್ಲಿ ಭಾಗವಹಿಸುತ್ತಿರುವ ತೇಜಸ್ ಇದಕ್ಕಾಗಿ ತಾಲೀಮು ನಡೆಸುತ್ತಿದ್ದಾರೆ.

ಚನ್ನಪಟ್ಟಣದ ಜಟ್ಟಿಗರ ಬೀದಿ ನಿವಾಸಿಯಾಗಿರುವ ಸುಶೀಲಾ ಹಾಗೂ ಟಿ. ಸುರೇಶ್ ಜಟ್ಟಿ ದಂಪತಿ ಪುತ್ರನಾಗಿರುವ ತೇಜಸ್ (27) ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಳಗದಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ತೇಜಸ್, ಉಸ್ತಾದ್ ಪುರುಷೊತ್ತಮ್ ಹಾಗೂ ಮಾಜಿ ಜಟ್ಟಿಗಳಾದ ವಿದ್ಯಾಧರಜಟ್ಟಿ, ಚಂದ್ರಶೇಖರ್ ಜಟ್ಟಿ ಹಾಗೂ ರಘು ಜಟ್ಟಿ ಮಾರ್ಗದರ್ಶನದಲ್ಲಿ ಎದುರಾಳಿಯ ರಕ್ತ ಚಿಮ್ಮಲು ಬೇಕಾದ ತಂತ್ರಗಳ ಕಲಿಕೆಯಲ್ಲಿ ನಿರತರಾಗಿದ್ದಾರೆ.

ಮೈಸೂರು ರಾಜಮನೆತನಕ್ಕೂ ನಮ್ಮ ಚನ್ನಪಟ್ಟಣ ಜಟ್ಟಿ ಜನಾಂಗಕ್ಕೂ ಅವಿನಾಭಾವ ಸಂಬಂಧವಿದೆ. ನಮಗೆ ರಾಜಮನೆತನದ ಬಗ್ಗೆ ಅಪಾರವಾದ ಸ್ವಾಮಿ ನಿಷ್ಠೆ ಇದೆ. ನಮ್ಮ ದೊಡ್ಡಪ್ಪ ಸೇರಿ ಸಂಬಂಧಿಕರು ಈ ಹಿಂದೆ ಕಾಳಗದಲ್ಲಿ ಭಾಗವಹಿಸಿದ್ದಾರೆ. ಈ ಬಾರಿಯ ಕಾಳಗದಲ್ಲಿ ಭಾಗವಹಿಸುತ್ತಿರುವುದು ನನ್ನ ಪುಣ್ಯವಾಗಿದೆ ಎಂದು ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸಲಿರುವ ತೇಜಸ್ ಜಟ್ಟಿ ತಿಳಿಸಿದರು.

Must Read