October 15, 2026
Thursday, October 15, 2026
spot_img

ನೋಡಿಕೊಳ್ಳಲು ಆಗುತ್ತಿಲ್ಲ ಎಂದು ಕಂದನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ತಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪತ್ನಿ ತವರು ಮನೆಗೆ ಹೋಗಿದ್ದು, ಮಗುವನ್ನು ಒಬ್ಬನೇ ನೋಡಿಕೊಳ್ಳಲಾಗದೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗುಜರಾತ್‌ನ ವಾವ್‌ ಥಾರಾದ್‌ ಪ್ರದೇಶದ ಸುಯಿಗಮ್‌ನಲ್ಲಿ ನಡೆದಿದೆ.

ತಂದೆ ಅಶೋಕ್‌ ರಾವಲ್‌ ತನ್ನ ಪತ್ನಿ ತವರು ಮನೆ ಸೇರಿದ ಬಳಿಕ ಮಗುವನ್ನು ನೋಡಿಕೊಳ್ಳಲಾಗಿಲ್ಲ. ಎರಡೂವರೆ ವರ್ಷದ ಕೂಸು ನವ್‌ಘನ್‌ಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ. ತದನಂತರ ಸ್ಮಶಾನದಲ್ಲಿ ಮಗುವನ್ನು ಹೂತು ಹಾಕಿದ್ದಾನೆ.

ಊರಿನವರ ಅನುಮಾನದ ನಂತರ ಪೊಲೀಸರು ಅಶೋಕ್‌ನನ್ನು ಬಂಧಿಸಿದ್ದಾರೆ. ಮಗು ಕೊನೆಯುಸಿರೆಳೆಯುವ ಮುನ್ನ ಸುಟ್ಟ ಗಾಯಗಳೊಂದಿಗೆ ಮಂಚದ ಮೇಲೆ ಕುಳಿತಿರುವ ವಿಡಿಯೋವೊಂದು ಬೆಳಕಿಗೆ ಬಂದಿದ್ದು, ಎಂತವರಿಗೂ ಕಣ್ಣಲ್ಲಿ ನೀರು ಬರುವಂತಿದೆ. ಪತ್ನಿ ಇಲ್ಲದ ಮೇಲೆ ಮಗುವನ್ನು ಸಾಕುವುದು, ಊಟ ಹಾಕುವುದು, ಮಕ್ಕಳ ಅಳು ನಿಭಾಯಿಸುವುದು ಹೊರೆ ಎಂದು ಅಶೋಕ್‌ ಪರಿಗಣಿಸಿದ್ದ.

ಮಗುವನ್ನು ಕೊಂದರೆ ಕೇಸ್‌ ಆಗುವ ಭಯಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ, ನಂತರ ಮಗುವಿನ ಮೇಲೆ ಬಿಸಿ ಎಣ್ಣೆ ಬಿದ್ದ ನಾಟಕ ಆಡಿದ್ದಾನೆ. ಆಸ್ಪತ್ರೆಗೂ ಕರೆದೊಯ್ದಿದ್ದಾನೆ. ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ತಕ್ಷಣ ನಾಲ್ಕೈದು ನೆಂಟರಿಗೆ ಕರೆ ಮಾಡಿ, ಅವರ ಸಮ್ಮುಖದಲ್ಲಿ ಸ್ಮಶಾನದಲ್ಲಿ ಕಂದನನ್ನು ಹೂತು ಹಾಕಲಾಗಿದೆ.

ಆರೋಪಿಯ ಚಿಕ್ಕಪ್ಪನೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮೃತದೇಹವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ನಂತರ ಹೆಚ್ಚಿನ ಮಾಹಿತಿ ದೊರೆಯಲಿದೆ. ಈಗಿನ ಕಾಲದಲ್ಲಿ ಒಂದು ಮಗುವಿಗಾಗಿ ಜನ ಲಕ್ಷ ಲಕ್ಷ ಖರ್ಚು ಮಾಡಲು ಬಯಸುತ್ತಾರೆ. ಮಗುವಿಗಾಗಿ ಏನೆಲ್ಲಾ ತ್ಯಾಗ ಮಾಡಲು ಬಯಸುತ್ತಾರೆ. ಆದರೆ ದೇವರು ಕರುಣಿಸಿರುವ ಮಗುವನ್ನು ಬಿಟ್ಟು ಹೋದ ತಾಯಿ, ಮಗು ಹೊರೆ ಎಂದು ಭಾವಿಸಿ ಬೆಂಕಿ ಇಟ್ಟ ತಂದೆ ಬಗ್ಗೆ ಕೇಳಿ ಆತಂಕವಾಗಿದೆ ಎಂದು ಸುಯಿಗಮ್‌ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

Must Read