ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಅಕ್ರಮಗಳ ಆರೋಪಗಳನ್ನು ಮುಂದಿಟ್ಟುಕೊಂಡು ದೆಹಲಿಯಲ್ಲಿ ನಡೆಯಬೇಕಿದ್ದ ‘ಲೆಹ್ರಾ ದೋ ತಿರಂಗಾ’ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದ್ದಾರೆ.
ಅಕ್ಟೋಬರ್ 16ರಂದು ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಸಂಜೆ 5 ಗಂಟೆಗೆ ಸಭೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ (CJP) ಕರೆ ನೀಡಿದ್ದು, ದೊಡ್ಡ ಸಂಖ್ಯೆಯಲ್ಲಿ ಜನರು ಸೇರದಂತೆ ದೆಹಲಿ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ರಾಷ್ಟ್ರಧ್ವಜ ಹಿಡಿದು ಪಾಲ್ಗೊಳ್ಳುವಂತೆ ಕರೆ
ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜ ಹಿಡಿದು ಪಾಲ್ಗೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದ್ದರು. ಆದರೆ, ದೊಡ್ಡ ಸಭೆಗೆ ಅನುಮತಿ ನೀಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬದಲಾಗಿ, ನಿಗದಿತ ನಿಯಮಗಳನ್ನು ಪಾಲಿಸುವ ಷರತ್ತಿನೊಂದಿಗೆ 11 ಜನರ ಸಣ್ಣ ಗುಂಪಿಗೆ ಸೂಕ್ತ ಸ್ಥಳದಲ್ಲಿ ರಾಷ್ಟ್ರಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು ಅವಕಾಶ ಕಲ್ಪಿಸಬಹುದು ಎಂದು ಪೊಲೀಸ್ ಉಪ ಆಯುಕ್ತೆ ನೇಹಾ ಯಾದವ್ ತಿಳಿಸಿದ್ದಾರೆ.
ಸೆಂಟ್ರಲ್ ಪಾರ್ಕ್ ಬಂದ್
ಇದರ ಜೊತೆಗೆ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಆಡಳಿತಾತ್ಮಕ ಕಾರಣಗಳಿಂದ ಅಕ್ಟೋಬರ್ 16 ಮತ್ತು 17ರಂದು ಸೆಂಟ್ರಲ್ ಪಾರ್ಕ್ ಮುಚ್ಚಿರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕನ್ನಾಟ್ ಪ್ಲೇಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿರ್ಬಂಧಾಜ್ಞೆಗಳು ಜಾರಿಯಲ್ಲಿದ್ದು, ಅವುಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನ್ಯಾಯಾಲಯದ ಮೊರೆ ಹೋದ ವ್ಯಾಪಾರಿಗಳು
ಈ ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ಕಾರ್ಯಕ್ರಮವನ್ನು ತಡೆಯುವಂತೆ ಆದೇಶಿಸಲು ನಿರಾಕರಿಸಿತ್ತು. ಹಬ್ಬದ ಸಮಯದಲ್ಲಿ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂಬ ಆತಂಕದಿಂದ ಕನ್ನಾಟ್ ಪ್ಲೇಸ್ನ ವ್ಯಾಪಾರಿಗಳು ಕೂಡ ನ್ಯಾಯಾಲಯದ ಮೊರೆ ಹೋಗಿದ್ದರು.



