October 16, 2026
Friday, October 16, 2026
spot_img

ನವರಾತ್ರಿ ವಿಶೇಷ | ರಾಕ್ಷಸರನ್ನು ಸಂಹರಿಸಿದ ಉಗ್ರ ದೇವತೆ ʼಮಾ ಕಾತ್ಯಾಯಿನಿʼಯನ್ನು ಹೀಗೆ ಪೂಜಿಸಿ

ಇಂದು ನವರಾತ್ರಿಯ ಆರನೇ ದಿನ. ಈ ದಿನದಂದು ದೇವಿ ಕಾತ್ಯಾಯಿನಿಯನ್ನು ಆರಾಧಿಸಲಾಗುತ್ತದೆ. ದುರ್ಗಾ ದೇವಿಯ ಉಗ್ರ ಅವತಾರವೇ ಮಾ ಕಾತ್ಯಾಯಿನಿ. ಈ ತಾಯಿ ಸಿಂಹಾರೂಢಳಾಗಿದ್ದು, ನಾಲ್ಕು ತೋಳುಗಳನ್ನ ಹೊಂದಿದ್ದಾಳೆ.

ಒಂದರಲ್ಲಿ ಕಮಲದ ಹೂವು, ಮತ್ತೊಂದರಲ್ಲಿ ಖಡ್ಗ, ಇನ್ನೆರಡು ಕೈಗಳಲ್ಲಿ ಅಭಯ ಮುದ್ರೆ ಹಾಗೂ ವರದ ಮುದ್ರೆಯನ್ನು ಹೊಂದಿದ್ದಾಳೆ. ಕಾತ್ಯಾಯನ ಮಹರ್ಷಿಗಳ ಕಠಿಣ ತಪಸ್ಸಿನಿಂದಾಗಿ ದೇವಿಯ ಜನನವಾಗುತ್ತದೆ. ಹೀಗಾಗಿಯೇ ದೇವಿಗೆ ಕಾತ್ಯಾಯಿನಿ ಎನ್ನುವ ಹೆಸರು ಬರುತ್ತದೆ. ಭೂಲೋಕದಲ್ಲಿ ಮಹಿಷಾಸುರನೆಂಬ ರಾಕ್ಷಸನ ಹಾವಳಿ ಹೆಚ್ಚಾದಾಗ ದೇವತೆಗಳು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಮೊರೆ ಹೋಗುತ್ತಾರೆ.

ತ್ರಿಮೂರ್ತಿಗಳ ಕೋಪ ಹಾಗೂ ತೇಜಸ್ಸಿನಿಂದಾಗಿ ಒಂದು ದಿವ್ಯ ಶಕ್ತಿಯು ಜಗತ್ತಿನಲ್ಲಿ ಉದ್ಭವವಾಗುತ್ತದೆ. ಈ ದಿವ್ಯ ಶಕ್ತಿಯು ಕಾತ್ಯಾಯನ ಮಹರ್ಷಿಗಳ ಆಶ್ರಮದಲ್ಲಿ ಮಗುವಾಗಿ ಜನಿಸಿತು. ಕಾತ್ಯಾಯಿನಿ ದೇವಿ ದುಷ್ಟ ರಾಕ್ಷಸನಾದ ಮಹಿಷಾಸುರನನ್ನು ಸಂಹಾರ ಮಾಡಿದಳು. ಹೀಗಾಗಿ ಈಕೆಗೆ ಮಹಿಷಾಸುರಮರ್ಧಿನಿ ಎನ್ನುವ ಹೆಸರೂ ಇದೆ.

ದುರ್ಗಾ ದೇವಿಯ ಆರನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಅಧಿದೇವತೆ, ಆಕೆಯನ್ನು ಯುದ್ಧದ ದೇವತೆ ಎಂದೂ ಕರೆಯುತ್ತಾರೆ. ತಾಯಿಯ ರೂಪವು ಚಿನ್ನದಂತೆ ಪ್ರಕಾಶಮಾನವಾಗಿದೆ ಮತ್ತು ಅತ್ಯಂತ ದೈವಿಕವಾಗಿದೆ. ತಾಯಿಗೆ ನಾಲ್ಕು ತೋಳುಗಳಿವೆ, ಆಕೆ ತನ್ನ ನಾಲ್ಕು ಕೈಗಳಲ್ಲಿ ಒಂದು ಕೈಯಲ್ಲಿ ಕಮಲದ ಹೂವನ್ನು, ಮತ್ತೊಂದರಲ್ಲಿ ಖಡ್ಗವನ್ನು ಮತ್ತು ಇನ್ನೆರೆಡು ಕೈಗಳಲ್ಲಿ ಭಕ್ತರಿಗೆ ಆಶೀರ್ವಾದವನ್ನು ಕೊಡುವ ಮುದ್ರೆಯನ್ನು ಹೊಂದಿದ್ದು, ಸಿಂಹಾಸನರೂಢಳಾಗಿದ್ದಾಳೆ. ಶಾಸ್ತ್ರಗಳ ಪ್ರಕಾರ ತಾಯಿಯನ್ನು ಸರಿಯಾಗಿ ಪೂಜಿಸಿ ಕೆಲವು ವಿಶೇಷ ಪೂಜೆಗಳನ್ನು ಮಾಡುವುದರಿಂದ ಹೆಣ್ಣು ಮಕ್ಕಳ ವಿವಾಹವು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ ಮತ್ತು ಸೂಕ್ತ ವರ ದೊರೆಯುತ್ತಾನೆ ಎನ್ನುವ ನಂಬಿಕೆಯಿದೆ.

Must Read