ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಿರೀಕ್ಷಿತವಾಗಿ ಬರುವ ಸಂಪತ್ತು ಸ್ಥಿರವಲ್ಲ. ಆಕಸ್ಮಿಕವಾಗಿ ಸಂಪತ್ತು ಬಂದಾಗ ವಿವೇಕವು ಕೆಲಸ ಮಾಡುವುದಿಲ್ಲ. ಅನ್ಯಾಯದ ಮಾರ್ಗದಿಂದ ಸಂಪಾದಿಸಿದ ಹಣ ಬಂದಾಗ ಮನಸ್ಸು ಭ್ರಮೆಗೊಳಗಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಶ್ರೀಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಶುಕ್ರವಾರ ಲಲಿತೋಪಾಖ್ಯಾನ ಕುರಿತು ಪ್ರವಚನವನ್ನು ಅನುಗ್ರಹಿಸಿದರು.

ಸನಾತನ ಧರ್ಮ ಸ್ತ್ರೀಯರ ವಿರುದ್ಧವಾಗಿಲ್ಲ. ಕೆಲವರು ಅಪವ್ಯಾಖ್ಯಾನ ಮಾಡುವುದಿದೆ, ಆದರೆ ಧರ್ಮಶಾಸ್ತ್ರದಲ್ಲಿ ಸ್ತ್ರೀಯರಿಗೆ ಅವರದ್ದೇ ಆದ ಮಹತ್ವವಿದೆ. ಗಂಡನ ಪಾಪದಲ್ಲಿ ಹೆಂಡತಿಗೆ ಪಾಲಿಲ್ಲ. ಆದರೆ ಗಂಡನ ಪುಣ್ಯದಲ್ಲಿ ಹೆಂಡತಿಗೆ ಫಲವಿದೆ. ಅದೇ ಹೆಂಡತಿಯ ಪುಣ್ಯದಲ್ಲಿ ಗಂಡನಿಗೆ ಫಲವಿಲ್ಲ. ಆದರೆ ಹೆಂಡತಿಯ ಪಾಪದಲ್ಲಿ ಗಂಡನಿಗೆ ಪಾಲಿದೆ. ಇದು ಸನಾತನ ಧರ್ಮದಲ್ಲಿ ಸ್ತ್ರೀಯರ ಕುರಿತಾಗಿರುವ ಕಾಳಜಿಯಾಗಿದೆ ಎಂದು ಲಲಿತೋಪಾಖ್ಯಾನದ ಕಥೆಯೊಂದರ ಆಧಾರದಲ್ಲಿ ಸ್ವಾಮೀಜಿ ವಿವರಿಸಿದರು.

ಬೃಹಸ್ಪತಿಯು ಇಂದ್ರನಿಗೆ ಉಪದೇಶಿಸಿದ ಕಥೆಯನ್ನು ಉಲ್ಲೇಖಿಸಿದ ಶ್ರೀಗಳು, ವಜ್ರನೆಂಬ ಕಳ್ಳನು ಹಣವನ್ನು ಕದ್ದು ಕಾಡಿನಲ್ಲಿ ಬಚ್ಚಿಡುತ್ತಿದ್ದ. ಅದನ್ನು ನೋಡಿದ ವೀರದತ್ತನೆಂಬ ವ್ಯಾಧನು ಅಡಗಿಸಿಟ್ಟ ಆ ಹಣದಲ್ಲಿ ಹತ್ತನೇ ಒಂದು ಪಾಲನ್ನು ತೆಗೆದುಕೊಂಡು ಬಂದು, ಅವನ ಹೆಂಡತಿಯ ಸಲಹೆಯಂತೆ ಜನೋಪಯೋಗಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಆ ಹಣವನ್ನು ಬಳಸುತ್ತಾನೆ. ಕದ್ದ ಹಣದಲ್ಲಿ ಸಾಮಾಜಿಕ ಕಾರ್ಯ ಮಾಡಿರುವುದರಿಂದ ವೀರದತ್ತನ ದೇಹಾಂತವಾದಾಗ, ಆತನು ಕೆಲಕಾಲ ಸದ್ಗತಿಯನ್ನು ಪಡೆಯುವುದಿಲ್ಲ. ಆನಂತರ ಉತ್ತಮ ಗತಿಯನ್ನು ಪಡೆಯುತ್ತಾನೆ ಮಾತ್ರವಲ್ಲ ವೀರದತ್ತನ ಪುಣ್ಯ ಕಾರ್ಯಗಳಲ್ಲಿ ದುಡ್ಡನ್ನು ಕದ್ದ ವಜ್ರ ಹಾಗೂ ಹಣದ ನಿಜವಾದ ಮಾಲಿಕರಿಗೂ ಪಾಲುಸಿಗುತ್ತದೆ. ಇದು ಪಾಪ ಪುಣ್ಯಗಳು ಹೇಗೆ ನಿರ್ಧಾರಿತವಾಗುತ್ತದೆ ಹಾಗೂ ಅನ್ಯಾಯದ ದುಡ್ಡನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿದರೆ ಏನಾಗುತ್ತದೆ ಎಂಬುದನ್ನು ತಿಳಿಸುತ್ತದೆ ಎಂದು ಕಥೆಯನ್ನು ಶ್ರೀಗಳು ವಿವರಿಸಿದರು.

ವ್ರತ ಶಬ್ದದ ಜೊತೆಗೇ ಆಹಾರದ ನಿಯಮಗಳು ಇದೆ. ನವರಾತ್ರ ವ್ರತಕ್ಕೆ ಒಂಬತ್ತೂ ದಿನ ಉಪವಾಸವನ್ನು ಹೇಳಲಾಗಿದೆ. ಉಪವಾಸ ಸಾಧ್ಯವಾಗದಿದ್ದರೆ ಒಂದೇ ಹೊತ್ತಿನ ಊಟ ಅಥವಾ ಶುದ್ಧ ಸಾತ್ವಿಕ ಆಹಾರವನ್ನಷ್ಟೇ ಸ್ವೀಕರಿಸಿ ನವರಾತ್ರ ವ್ರತವನ್ನು ಆಚಾರಿಸಬೇಕು ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

ಖ್ಯಾತ ಆಯುರ್ವೇದ ವೈದ್ಯರಾದ ಡಾ.ಗಿರಿಧರ ಕಜೆ, ವಿದ್ವಾನ್ ಬಂದಗದ್ದೆ ನಾಗರಾಜ್, ಶ್ರೀಕಂಠಯ್ಯ ಹೆಬ್ಬಾಲೆ, ಉದ್ಯಮಿ ವಾದಿರಾಜ ಸಾಮಗ ಹಾಗೂ ದಿನಪ್ರಧಾನರಾಗಿ ಎನ್.ಜಿ. ಭಾಗ್ವತ್ ದಂಪತಿ ಉಪಸ್ಥಿತರಿದ್ದರು. ಶ್ರೀಸೂಕ್ತ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ, ಭಜನಾ ಮಂಡಳಿಗಳಿಂದ ಭಜನೆ, ದುರ್ಗಾ ದೀಪನಮಸ್ಕಾರ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.



