ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಸಿರಾಟದ ಸಮಸ್ಯೆ ಹಾಗೂ ಎದೆ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದ್ದು, ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ತೀವ್ರ ನಿಗಾ ಘಟಕದಲ್ಲಿ ಹಿರಿಯ ನರವಿಜ್ಞಾನಿ ಡಾ. ವಿನೀತ್ ಸೂರಿ ಅವರ ನೇತೃತ್ವದ ವೈದ್ಯರ ತಂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದು, ಆರೋಗ್ಯ ಸ್ಥಿರಗೊಂಡ ಹಿನ್ನೆಲೆಯಲ್ಲಿ ಮನೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಹೆಲ್ತ್ ಬುಲೆಟಿನ್ನಲ್ಲಿ ಸ್ಪಷ್ಟಪಡಿಸಿದೆ.
ಮೂರು ದಿನಗಳ ಹಿಂದೆ ಅಡ್ವಾಣಿ ಅವರಿಗೆ ತೀವ್ರ ಎದೆಯ ಸೋಂಕು ಹಾಗೂ ಶ್ವಾಸಕೋಸದ ಸಮಸ್ಯೆಯಿಂದಾಗಿ ಜಸೋಲಾ ವಿಹಾರ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ದೌರ್ಬಲ್ಯ ಹಾಗೂ ಎದೆಯ ಸೋಂಕು ಹೆಚ್ಚಾಗಿದ್ದ ಕಾರಣ ಅವರನ್ನು ತಕ್ಷಣವೇ ಐಸಿಯುಗೆ ಸ್ಥಳಾಂತರಿಸಿ ತಜ್ಞ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಮುಂದುವರೆಸಲಾಯಿತು. ಚಿಕಿತ್ಸೆಗೆ ಅಡ್ವಾಣಿ ಅವರ ದೇಹ ಉತ್ತಮವಾಗಿ ಸ್ಪಂದನೆ ನೀಡಿದ್ದು, ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.



