ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕೋಟಾ ನಗರದಲ್ಲಿ ಮೂವರು ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮುಂಬೈನ ಜುಹೂ ಪ್ರದೇಶದ ಪುಷ್ಪಾ ಪಾರ್ಕ್ ಬಳಿ ಈ ಭಯಾನಕ ಘಟನೆ ಸಂಭವಿಸಿದೆ. ಭಾನುವಾರ ಸಂಜೆ ಟೈಗರ್ ಶ್ರಾಫ್ ಫುಟ್‌ಬಾಲ್ ಮುಗಿಸಿ ವಾಪಾಸಾಗುವ ವೇಳೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ. ನಟ ಕುಳಿತಿದ್ದ ಬಿಎಂಡಬ್ಲೂ ಕಾರಿನ ಮೇಲೆ ಐದು ಸುತ್ತುಗಳ ಗುಂಡಿನ ದಾಳಿಯಾಗಿದೆ.
ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಈ ದಾಳಿಯಲ್ಲಿ ನಟನ ಕಾರಿನ ಚಾಲಕ ಮತ್ತು ಸಮೀಪದಲ್ಲಿದ್ದ ಆಟೋ ರಿಕ್ಷಾ ಚಾಲಕನಿಗೆ ಗುಂಡೇಟು ತಗುಲಿದೆ. ಗಾಯಗೊಂಡ ಇವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ.
ಪಿಸ್ತೂಲ್ ಜಾಮ್ ಆಗಿದ್ದಕ್ಕೆ ಉಳಿಯಿತು ಟೈಗರ್ ಪ್ರಾಣ
ಶೂಟೌಟ್ ನಡೆಸುವ ಮೊದಲು ದುಷ್ಕರ್ಮಿಗಳು ಮುಕ್ಕಾಲು ಗಂಟೆ ಕಾದು ಕುಳಿತಿದ್ದರು. ನಂತರ ಟೈಗರ್ ಬಂದ ತಕ್ಷಣ ಗುಂಡು ಹಾರಿಸಲು ಯತ್ನಿಸಿದ್ದಾರೆ. ಆದರೆ ಆ ವೇಳೆ ಪಿಸ್ತೂಲ್ ಜಾಮ್ ಆಗಿದೆ. ಹೀಗಾಗಿ ಟೈಗರ್ ಪ್ರಾಣ ಉಳಿದಿದೆ. ದಾಳಿಯ ವೇಳೆ ಒಟ್ಟು 7 ಸುತ್ತು ಗುಂಡು ಹಾರಿಸಲಾಗಿದೆ. ಅವುಗಳಲ್ಲಿ 5 ಗುಂಡುಗಳು ಕಾರಿಗೆ ತಗುಲಿವೆ. ಉಳಿದ ಎರಡು ಗುಂಡುಗಳು ಗುರಿ ತಪ್ಪಿವೆ. ಮೊದಲಿಗೆ ಗುಂಡು ಹಾರಿಸಿದ ಬಳಿಕ ದುಷ್ಕರ್ಮಿಗಳಲ್ಲಿ ಒಬ್ಬ ಕಾರಿನ ಪ್ರಯಾಣಿಕರ ಬದಿಯ ಕಿಟಕಿಯ ಬಳಿ ಬಂದು ಟೈಗರ್ ಶ್ರಾಫ್ ಅವರನ್ನು ಹತ್ತಿರದಿಂದ ಗುರಿಯಾಗಿಸಲು ಯತ್ನಿಸಿದ್ದಾನೆ. ಆದರೆ, ಆತನ ಬಳಿ ಇದ್ದ ದೇಶೀ ನಿರ್ಮಿತ ಪಿಸ್ತೂಲ್ ಜಾಮ್ ಆಗಿದೆ, ಆದ್ದರಿಂದ ಟೈಗರ್ ಶ್ರಾಫ್ ಅವರ ಮೇಲೆ ಗುಂಡು ಹಾರಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.



