October 19, 2026
Monday, October 19, 2026
spot_img

ದೆಹಲಿಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಗೆ ಟಕ್ಕರ್: ‘ಲಾಲ್ ಹಿಟ್ ಜನತಾ ಪಾರ್ಟಿ’ ಅಖಾಡಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಕನ್ನಾಟ್ ಪ್ಲೇಸ್ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ವಿರುದ್ಧ ‘ಲಾಲ್ ಹಿಟ್ ಜನತಾ ಪಾರ್ಟಿ’ ಎಂಬ ಗುಂಪು ಪ್ರತ್ಯಕ್ಷವಾಗಿದೆ.

ಭಾನುವಾರ ದೆಹಲಿಯ ಮಾಲವೀಯ ಸ್ಮೃತಿ ಭವನದಲ್ಲಿ ತನ್ನ ಮೊದಲ ಸದಸ್ಯತ್ವ ಸಭೆ ನಡೆಸಿದ ಗುಂಪು, ಪ್ರತಿಭಟನಾಕಾರರು ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

‘ಮೋದಿ ಕರೆ ನೀಡಿದರೆ ಇನ್ನಷ್ಟು ಜನ ಸೇರುತ್ತಾರೆ’

ಗುಂಪಿನ ಮುಖ್ಯಸ್ಥ ಅಯಾನ್ ಭಟ್ನಾಗರ್ ಮಾತನಾಡಿ, ತಮ್ಮ ಮುಂದಿನ ಕಾರ್ಯತಂತ್ರ ರೂಪಿಸುವುದು ಮತ್ತು ಕಡಿಮೆ ಸಮಯದಲ್ಲೇ ಹೆಚ್ಚಿನ ಜನರನ್ನು ಒಗ್ಗೂಡಿಸುವ ಸಾಮರ್ಥ್ಯ ಪ್ರದರ್ಶಿಸುವುದು ಸಭೆಯ ಉದ್ದೇಶ ಎಂದರು. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರೆ ಎಷ್ಟು ಜನರು ಸೇರಬಹುದು ಎಂದು ಪ್ರಶ್ನಿಸಿದ ಅವರು, ದಸರಾ ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ಸಾರುವ ಹಬ್ಬವಾಗಿದ್ದು, ಜನರು ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾಗದೆ ಬೀದಿಗಿಳಿಯಬೇಕು ಎಂದು ಹೇಳಿದರು.

ಪ್ರತಿಭಟನೆಗಳಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ ಎಂದು ಅವರು ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಬೇಡಿಕೆ ಮುಂದಿಟ್ಟಿರುವುದನ್ನೂ ಅವರು ಪ್ರಶ್ನಿಸಿದರು. 2023ರಲ್ಲಿ ಜಾರಿಗೆ ಬಂದ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕನಿಗೂ ಸ್ಥಾನವಿದೆ ಎಂದು ಉಲ್ಲೇಖಿಸಿದ ಅವರು, ಹಿಂದಿನ ಆಯುಕ್ತರ ನೇಮಕಾತಿ ಮತ್ತು ಅಧಿಕಾರಾವಧಿಯನ್ನೂ ಪರಿಶೀಲಿಸಬೇಕು ಎಂದರು.

Must Read