ಹೊಸದಿಗಂತ ವರದಿ ವಿಜಯಪುರ:
ಹೊಸ ಮನೆಗೆ ಪೇಂಟಿಂಗ್ ಮಾಡಲು ಬಂದ ಯುವಕನ ಸ್ನೇಹ ಬೆಳಸಿ, ಪತ್ನಿಯೇ ಪತಿಯನ್ನು ಹತ್ಯೆ ಮಾಡಿಸಿರುವ ಪ್ರಕಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ರಸ್ತೆ ಅಪಘಾತ ಎಂದು ದಾಖಲಾಗಿದ್ದ ಪ್ರಕರಣ ಸದ್ಯ ಕೊಲೆ ಎಂಬುದು ಬೆಳಕಿಗೆ ಬಂದಿದ್ದು, ತನ್ನ ಪತಿಯನ್ನೇ ಹತ್ಯೆ ಮಾಡಲು ಪತ್ನಿಯೇ ಸಂಚು ರೂಪಿಸಿದ ಪ್ರಸಂಗ ನಡೆದಿದೆ.
ನಗರದ ಆನಂದ ರಾವುತಪ್ಪ ಕಲ್ಲೂರ (25), ಅಶ್ವಿನಿ ರಾಜಶೇಖರ ಬಿರಾದಾರ (30), ಸಚಿನ್ ಪರಶುರಾಮ ಬಡಳ್ಳಿ (24) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ನಾಲ್ವರು ಬಂಧಿತ ಆರೋಪಿಗಳು ಎಂದರು.
ಇದನ್ನೂ ಓದಿ:
ಕಳೆದ ಅ.4 ರಂದು ರಾಜಶೇಖರ ಬಿರಾದಾರ ಅವರ ರಸ್ತೆ ಅಪಘಾತವಾಗಿತ್ತು. ಜುಮನಾಳ ರಿಂಗ್ ರೋಡ್ ಬಳಿ ವಾಕಿಂಗ್ ಹೋಗುವ ಸಂದರ್ಭದಲ್ಲಿ ವಾಹನ ಡಿಕ್ಕಿಯಾಗಿ ಅವರು ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಸಹಜ ಅಫಘಾತವೆಂದೆ ಭಾವಿಸಲಾಗಿದ್ದರು, ಇದರಲ್ಲಿ ಸಂಶಯ ಮೂಡಿದ್ದರಿಂದ ತನಿಖೆ ನಡೆಸಿದ ಇದು ಪೂರ್ವಯೋಜಿತ ಕೊಲೆ ಎನ್ನುವುದು ತಿಳಿದ ಬಂದಿದೆ ಎಂದರು.
ಪ್ರಕರಣದ ತನಿಖೆ ವೇಳೆ ಅಪಘಾತದ ಕುರಿತು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಮುಂದಿನ ತನಿಖೆಯನ್ನು ವಿಜಯಪುರ ನಗರ ಡಿವೈಎಸ್ಪಿ ನಾಗರಾಜ ಜಿ. ಅವರಿಗೆ ವಹಿಸಲಾಗಿತ್ತು. ತನಿಖೆ ಕೈಗೊಂಡ ಅವರು, ಮದೀನಾ ನಗರದ ಪೇಂಟರ್ ಆನಂದ ರಾವುತಪ್ಪ ಕಲ್ಲೂರ (25) ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಹಿಂದಿನ ಸಂಚು ಬೆಳಕಿಗೆ ಬಂದಿದೆ ಎಂದರು.
ಸುಮಾರು 10 ವರ್ಷಗಳ ಹಿಂದೆ ಮೃತ ರಾಜಶೇಖರ ಮತ್ತು ಅಶ್ವಿನಿ ವಿವಾಹವಾಗಿದ್ದು, ಅವರಿಗೆ ಆರು ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಈಚೆಗೆ ಏಳು ತಿಂಗಳ ಹಿಂದೆ ಹೊಸ ಮನೆ ನಿರ್ಮಿಸಿದ್ದ ರಾಜಶೇಖರ ಅವರು, ಮನೆಯ ಪೇಂಟಿಂಗ್ ಕೆಲಸವನ್ನು ಆನಂದ ಕಲ್ಲೂರಗೆ ನೀಡಿದ್ದರು. ಈ ಸಂದರ್ಭದಲ್ಲಿ ಅಶ್ವಿನಿ ಮತ್ತು ಆನಂದ ನಡುವೆ ಪರಿಚಯ ಬೆಳೆದು ಸ್ನೇಹವಾಗಿತ್ತು. ಪತಿಯಿಂದ ದೂರವಾಗಲು ಬಯಸಿದ್ದ ಅಶ್ವಿನಿ, ರಾಜಶೇಖರನನ್ನು ಕೊಲೆ ಮಾಡುವ ಕುರಿತು ಆನಂದನೊಂದಿಗೆ ಚರ್ಚಿಸಿ ಸಂಚು ರೂಪಿಸಿರುವುದು ತಿಳಿದು ಬಂದಿದೆ ಎಂದರು.
ಸಂಚಿನಂತೆ ಅ. 4 ರಂದು ಮುಂಜಾನೆ ರಾಜಶೇಖರ ವಾಕಿಂಗ್ಗೆ ತೆರಳಿದ್ದ ಮಾಹಿತಿಯನ್ನು ಅಶ್ವಿನಿ, ಆನಂದನಿಗೆ ನೀಡಿದ್ದಳು. ಆನಂದ ತನ್ನ ಬೈಕ್ನಲ್ಲಿ ರಾಜಶೇಖರ ಅವರನ್ನು ಹಿಂಬಾಲಿಸಿ, ಅವರಿರುವ ಸ್ಥಳದ ಬಗ್ಗೆ ಸಚಿನ್ ಬಡಳ್ಳಿ (24) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ಮಾಹಿತಿ ನೀಡಿದ್ದನು. ಬಳಿಕ ಸಚಿನ್ ಮತ್ತು ಬಾಲಕ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಬಂದು, ಜುಮನಾಳ ರಸ್ತೆಯ ಕಿಯಾ ಶೋರೂಂ ಸಮೀಪ ನಡೆದುಕೊಂಡು ಹೋಗುತ್ತಿದ್ದ ರಾಜಶೇಖರ ಅವರಿಗೆ ಹಿಂದಿನಿಂದ ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದರು.
ಡಿವೈಎಸ್ಪಿ ನಾಗರಾಜ ಜಿ. ಸೇರಿದಂತೆ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.



