October 20, 2026
Tuesday, October 20, 2026
spot_img

ವಿಜಯದಶಮಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಡಿನಾದ್ಯಂತ ವಿಜಯದಶಮಿ ಹಬ್ಬದ ಸಂಭ್ರಮ ಮನೆಮಾಡಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸಿರುವ ಉಭಯ ನಾಯಕರು, ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ ಸಂದೇಶವೇನು?

ಅಕ್ಟೋಬರ್ 20ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿ, ವಿಜಯದಶಮಿಯು ಸಂತೋಷ ಮತ್ತು ನಂಬಿಕೆಯಿಂದ ಕೂಡಿದ ವಿಜಯದ ಹಬ್ಬವಾಗಿದೆ ಎಂದು ಹೇಳಿದ್ದಾರೆ. ಈ ಹಬ್ಬವು ಪ್ರತಿಯೊಬ್ಬರ ಸಂಕಲ್ಪಕ್ಕೆ ಹೊಸ ಶಕ್ತಿ ನೀಡಲಿ, ಎಲ್ಲರ ಜೀವನದಲ್ಲಿ ಸಂತೋಷ, ಸಮೃದ್ಧಿ ಹಾಗೂ ಯಶಸ್ಸು ತುಂಬಿರಲಿ ಎಂದು ಹಾರೈಸಿದ್ದಾರೆ.

ಧರ್ಮ ಮತ್ತು ನ್ಯಾಯದ ವಿಜಯದ ಸಂಕೇತ

ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದಲ್ಲಿರುವ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಶುಭಾಶಯ ತಿಳಿಸಿದ್ದಾರೆ. ವಿಜಯದಶಮಿಯು ಭಗವಾನ್ ಶ್ರೀರಾಮನು ರಾವಣನ ವಿರುದ್ಧ ಸಾಧಿಸಿದ ವಿಜಯವನ್ನು ಸ್ಮರಿಸುವ ಹಬ್ಬವಾಗಿದ್ದು, ಅಧರ್ಮದ ಮೇಲೆ ಧರ್ಮದ ಮತ್ತು ಅನ್ಯಾಯದ ಮೇಲೆ ನ್ಯಾಯದ ಗೆಲುವನ್ನು ಪ್ರತಿನಿಧಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಶ್ರೀರಾಮನನ್ನು ನೀತಿ, ಧರ್ಮ ಮತ್ತು ಉತ್ತಮ ನಡವಳಿಕೆಯ ಪ್ರತೀಕವಾಗಿ ಪರಿಗಣಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿರುವ ಕರ್ತವ್ಯನಿಷ್ಠೆ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ರಾಷ್ಟ್ರಪತಿ ಕರೆ ನೀಡಿದ್ದಾರೆ. ಎಲ್ಲರನ್ನು ಒಳಗೊಳ್ಳುವ ಸಮಾಜ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಆಶಿಸಿದ್ದಾರೆ.

Must Read