ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಹಬ್ಬದ ಮೆರವಣಿಗೆಗಳು ಹಾಗೂ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ನಗರ ಪೊಲೀಸ್ ಆಯುಕ್ತರು ಅಕ್ಟೋಬರ್ 21ರಿಂದ ಜಾರಿಗೆ ಬರುವಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಚುನಾವಣಾ ಪ್ರಕ್ರಿಯೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಈ ಕ್ರಮದ ಉದ್ದೇಶವಾಗಿದೆ.
ದಸರಾ ಮೆರವಣಿಗೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ
ದಸರಾ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಆರ್.ಟಿ. ನಗರ, ಜೆ.ಸಿ. ನಗರ ಮತ್ತು ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ಟೋಬರ್ 21ರ ಮಧ್ಯಾಹ್ನ 12 ಗಂಟೆಯಿಂದ ಅಕ್ಟೋಬರ್ 22ರ ಮುಂಜಾನೆ 1 ಗಂಟೆಯವರೆಗೆ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಮದ್ಯದಂಗಡಿಗಳು, ಬಾರ್ಗಳು, ಪಬ್ಗಳು ಹಾಗೂ ಮದ್ಯ ಮಾರಾಟ ಮಾಡುವ ಇತರ ಮಳಿಗೆಗಳು ನಿರ್ಬಂಧವನ್ನು ಪಾಲಿಸಬೇಕು.
ಇದನ್ನೂ ಓದಿ:
ಎಂಎಲ್ಸಿ ಚುನಾವಣೆ: ಎರಡು ದಿನಗಳ ನಿರ್ಬಂಧ
ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 21ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 23ರ ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ನೈಋತ್ಯ, ವಾಯವ್ಯ, ಈಶಾನ್ಯ, ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ವಿವಿಧ ಪೊಲೀಸ್ ವಿಭಾಗಗಳ ವ್ಯಾಪ್ತಿಯಲ್ಲಿ ಈ ಆದೇಶ ಅನ್ವಯವಾಗಲಿದೆ.
ಅಕ್ಟೋಬರ್ 27ರಂದು ಮತ ಎಣಿಕೆ ಹಿನ್ನೆಲೆ ಡ್ರೈ ಡೇ
ಮತ ಎಣಿಕೆ ಹಿನ್ನೆಲೆಯಲ್ಲಿ ಅಲ್ಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 27ರಂದು ಬೆಳಗ್ಗೆ 6ರಿಂದ ರಾತ್ರಿ 11.59ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಹೋಟೆಲ್ಗಳಲ್ಲಿ ಊಟಕ್ಕೆ ತೊಂದರೆಯಿಲ್ಲ
ಮದ್ಯ ಮಾರಾಟಕ್ಕೆ ನಿರ್ಬಂಧವಿದ್ದರೂ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಎಂದಿನಂತೆ ಊಟದ ಸೇವೆ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.



