October 20, 2026
Tuesday, October 20, 2026
spot_img

15 ವರ್ಷಗಳಲ್ಲಿ 96.1 ಕಿ.ಮೀ. ವಿಸ್ತರಿಸಿದ ನಮ್ಮ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಸಂತಸ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋ 15 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಕೇವಲ 6.7 ಕಿಲೋಮೀಟರ್‌ನಿಂದ ಆರಂಭವಾದ ಮೆಟ್ರೋ ಜಾಲ ಇಂದು 96.1 ಕಿಲೋಮೀಟರ್‌ಗೆ ವಿಸ್ತರಿಸಿದ್ದು, ಬೆಂಗಳೂರಿನ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಸಿಎಂ ಡಿಕೆಶಿ, ಪ್ರತಿದಿನ ಲಕ್ಷಾಂತರ ಬೆಂಗಳೂರಿಗರು ಉದ್ಯೋಗ, ಶಿಕ್ಷಣ ಹಾಗೂ ತಮ್ಮ ನಿತ್ಯದ ಕೆಲಸಗಳಿಗಾಗಿ ಮೆಟ್ರೋವನ್ನು ಅವಲಂಬಿಸಿದ್ದಾರೆ. ಅವರ ಪ್ರಯಾಣವೇ ನಗರದ ಬೆಳವಣಿಗೆಯ ಕಥೆಯನ್ನು ಸಾರುತ್ತದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸುವುದು, ದೈನಂದಿನ ಪ್ರಯಾಣದ ಒತ್ತಡ ಕಡಿಮೆ ಮಾಡುವುದು ಮತ್ತು ನಗರದ ವಿವಿಧ ಭಾಗಗಳ ನಡುವಿನ ಸಂಪರ್ಕ ಸುಧಾರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿಹೇಳಿದ್ದಾರೆ.

ಬೆಂಗಳೂರಿನ ಪ್ರಗತಿಗೆ ವೇಗ ನೀಡುತ್ತಿರುವ ನಮ್ಮ ಮೆಟ್ರೋ, ಮುಂದಿನ ಪೀಳಿಗೆಗೂ ಸುಗಮ ಹಾಗೂ ಸುಲಭ ಪ್ರಯಾಣದ ವ್ಯವಸ್ಥೆಯಾಗಲಿ ಎಂಬ ಆಶಯವನ್ನು ಸಿಎಂ ಡಿಕೆಶಿ ವ್ಯಕ್ತಪಡಿಸಿದ್ದಾರೆ.

Must Read