October 20, 2026
Tuesday, October 20, 2026
spot_img

ಟೈಗರ್ ಶ್ರಾಫ್ ಮನೆ ಮೇಲೆ ನಿಗಾ ಇಡಲು ಬೈಕ್ ಟ್ಯಾಕ್ಸಿ ರೈಡರ್ ವೇಷ?: ರ‍್ಯಾಪಿಡೋ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದ ವ್ಯಕ್ತಿಯ ಹೆಸರು ತನಿಖೆಯಲ್ಲಿ ಕೇಳಿಬಂದಿದೆ. ಆರೋಪಿಗಳಲ್ಲಿ ಒಬ್ಬನಾದ ಹೃತಿಕ್ ಕುರ್ಮಿ ಈ ಹಿಂದೆ ರ‍್ಯಾಪಿಡೋದಲ್ಲಿ ಕ್ಯಾಪ್ಟನ್ ಆಗಿ ನೋಂದಾಯಿಸಿಕೊಂಡಿದ್ದ ಎನ್ನಲಾಗಿದ್ದು, ನಟನ ಚಲನವಲನಗಳ ಮೇಲೆ ನಿಗಾ ಇಡಲು ಬೈಕ್ ಟ್ಯಾಕ್ಸಿ ಸವಾರನಂತೆ ವರ್ತಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ರ‍್ಯಾಪಿಡೋ ಸಂಸ್ಥೆ ಸ್ಪಷ್ಟನೆ ನೀಡಿದೆ.

ಟೈಗರ್ ಶ್ರಾಫ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಹೃತಿಕ್ ಕುರ್ಮಿ ಅಲಿಯಾಸ್ ರೋಷನ್ ಫೈಟರ್ (22), ಫೂಲ್ ಸಿಂಗ್ (18) ಮತ್ತು ರೆಹಾನ್ ಅಲಿಯಾಸ್ ಸುಕ್ಕಾ (18) ಎಂಬ ಮೂವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ದಾಳಿಯ ಬಳಿಕ ರೈಲಿನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ. ಆರೋಪಿಗಳು ನೇಪಾಳಕ್ಕೆ ತೆರಳಲು ಯೋಜಿಸಿದ್ದರು ಎನ್ನಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:

ರ‍್ಯಾಪಿಡೋ ಹೇಳಿದ್ದೇನು?

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರ‍್ಯಾಪಿಡೋ, ಟೈಗರ್ ಶ್ರಾಫ್ ಮತ್ತು ಅವರ ತಂಡದ ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿದೆ. ನಟ ಸುರಕ್ಷಿತವಾಗಿರುವುದಕ್ಕೆ ಸಮಾಧಾನವಿದೆ ಎಂದು ತಿಳಿಸಿರುವ ಸಂಸ್ಥೆ, ಮಾಧ್ಯಮಗಳಲ್ಲಿ ಉಲ್ಲೇಖವಾಗಿರುವ ವ್ಯಕ್ತಿ ಅಕ್ಟೋಬರ್ 14ರಿಂದ ತನ್ನ ವೇದಿಕೆಯಲ್ಲಿ ಕ್ಯಾಪ್ಟನ್ ಆಗಿ ಸಕ್ರಿಯವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಘಟನೆಯ ದಿನ ಆತ ರ‍್ಯಾಪಿಡೋ ಸೇವೆಯ ಗ್ರಾಹಕನಾಗಿ ಬಳಸಿಕೊಂಡಿದ್ದ ಎನ್ನಲಾಗಿದೆ.

ದೇಶದ ಗಿಗ್ ಆರ್ಥಿಕತೆಯಲ್ಲಿ ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ವೇದಿಕೆಗಳಲ್ಲಿ ನೋಂದಾಯಿಸಿಕೊಳ್ಳುವುದು ಸಾಮಾನ್ಯ ಎಂದು ಸಂಸ್ಥೆ ಹೇಳಿದೆ. ಪ್ರಕರಣದ ತನಿಖೆಗೆ ಅಗತ್ಯವಿರುವ ಮಾಹಿತಿಯನ್ನು ಅಧಿಕಾರಿಗಳಿಗೆ ಒದಗಿಸಿದ್ದು, ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ. ಹಿಂಸಾಚಾರ ಅಥವಾ ಅಪರಾಧ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಹೊಂದಿರುವುದಾಗಿಯೂ ರ‍್ಯಾಪಿಡೋ ಹೇಳಿದೆ.

Must Read