October 22, 2026
Thursday, October 22, 2026
spot_img

ಹತ್ತು ವರುಷಗಳ ಹಿಂದಿನ ಕನಸಿನ ಕಥೆ: ಅಂದು ಅಪರಿಚಿತ ಬರೆದ ಸಂದೇಶವೇ ಇಂದು ಇತಿಹಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಹೆಮ್ಮೆಯ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ ದಿಗ್ಗಜ ಹ್ಯಾನ್ಸ್ ಝಿಮ್ಮರ್ ಒಟ್ಟಾಗಿ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಮಹತ್ವದ ಪ್ರಾಜೆಕ್ಟ್ ಹಿಂದೆ ಯಾರೂ ನಿರೀಕ್ಷಿಸದ ಒಂದು ಅಚ್ಚರಿಯ ಮತ್ತು ಅಪರೂಪದ ಹಿನ್ನೆಲೆ ಇದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚಿತ್ರದ ಆಲ್ಬಮ್ ಬಿಡುಗಡೆ ಸಮಾರಂಭದಲ್ಲಿ ರೆಹಮಾನ್ ಸ್ವತಃ ಈ ಕುರಿತು ಮಾತನಾಡಿದ್ದು, ಹತ್ತು ವರ್ಷಗಳ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎ.ಆರ್. ರೆಹಮಾನ್, 2014ರಲ್ಲಿ ತಮಗೆ ಬಂದಿದ್ದ ಇಮೇಲ್ ಒಂದನ್ನು ಹಂಚಿಕೊಂಡರು. ಸತೀಶ್ ಎಂಬ ವ್ಯಕ್ತಿ ತಮಗೆ ಇಮೇಲ್ ಕಳುಹಿಸಿ, ತಾವು ರಾಮಾಯಣ ಮಹಾಕಾವ್ಯಕ್ಕೆ ಸಂಗೀತ ಸಂಯೋಜಿಸುವ ಕನಸು ಕಂಡಿರುವುದಾಗಿ ತಿಳಿಸಿದ್ದಾಗಿ ಹೇಳಿದರು. ಆ ಅಪರಿಚಿತ ಅಭಿಮಾನಿ ಕಳುಹಿಸಿದ ಸಂದೇಶದಲ್ಲಿ, “ನೀವು ಮುಂಜಾನೆ ನನ್ನ ಕನಸಿನಲ್ಲಿ ಬಂದಿದ್ದೀರಿ. ಭಾರತ ಮತ್ತು ಜಗತ್ತಿನಾದ್ಯಂತ ಮಹಾನ್ ಕಾವ್ಯ ರಾಮಾಯಣವನ್ನು ಆಧರಿಸಿ ನೀವು ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ನಾನು ಕಂಡಿದ್ದೇನೆ. ಇದು ಖಂಡಿತವಾಗಿಯೂ ನಿಜವಾಗುತ್ತದೆ ಎಂದು ನಾನು ನಂಬುತ್ತೇನೆ” ಎಂದು ಬರೆಯಲಾಗಿತ್ತು. ಅಂದು ಯಾರೂ ಗಂಭೀರವಾಗಿ ತೆಗೆದುಕೊಳ್ಳದ ಆ ಮಾತು ಇಂದು ಅಕ್ಷರಶಃ ನಿಜವಾಗಿದೆ.

ಒಂದು ಕಾಲದಲ್ಲಿ ಅಭಿಮಾನಿಯೊಬ್ಬ ಕಂಡ ಕನಸು ಇಂದು ಭಾರತೀಯ ಸಿನಿರಂಗದ ಹೆಮ್ಮೆಯ ಯೋಜನೆಯಾಗಿ ರೂಪುಗೊಂಡಿದೆ. ವಿಧಿ ಅಥವಾ ಭವಿಷ್ಯ ಎಂಬುದು ಹೇಗೆಲ್ಲಾ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ದಶಕದ ಹಿಂದಿನ ಆ ಸಣ್ಣ ಸಂದೇಶವು ಇಂದು ದೊಡ್ಡದಾಗಿ ಸಾಕಾರಗೊಂಡಿರುವುದು ಸಂಗೀತ ಪ್ರಿಯರಲ್ಲಿ ರೋಮಾಂಚನ ಮೂಡಿಸಿದೆ. ರಾಮಾಯಣದ ಭವ್ಯ ದೃಶ್ಯಗಳಿಗೆ ಈ ಇಬ್ಬರು ಮಾಂತ್ರಿಕರು ಯಾವ ರೀತಿಯ ದೈವಿಕ ಮತ್ತು ರೋಮಾಂಚಕ ಸಂಗೀತ ನೀಡಲಿದ್ದಾರೆ ಎಂಬುದನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಒಬ್ಬ ಸಾಮಾನ್ಯ ಅಭಿಮಾನಿಯ ದೃಢ ನಂಬಿಕೆ ಮತ್ತು ಕನಸು ಇಂದು ಜಾಗತಿಕ ಮಟ್ಟದ ಸಂಗೀತ ಸಂಯೋಜನೆಯಾಗಿ ರೂಪುಗೊಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಒಟ್ಟಿನಲ್ಲಿ, ಪ್ರಪಂಚದಾದ್ಯಂತದ ರಾಮಾಯಣ ಪ್ರೇಮಿಗಳಿಗೆ ಈ ಚಿತ್ರದ ಸಂಗೀತವು ಒಂದು ಮರೆಯಲಾಗದ ದಿವ್ಯ ಅನುಭವವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

Must Read