ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿರುವ ಏಕೈಕ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’, ಸಂಪೂರ್ಣ ನವೀಕೃತ ರೂಪ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರಸಕ್ತ ಸಾಲಿನ ತನ್ನ ರಾಜಯಾನವನ್ನು ಮರು ಆರಂಭಿಸಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ನಿಲ್ದಾಣದಲ್ಲಿ ಜರುಗಿದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಈ ಐತಿಹಾಸಿಕ ಪಯಣಕ್ಕೆ ಚಾಲನೆ ನೀಡಿದರು.
ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಖಾಲಿ
ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ರೈಲಿಗೆ ಪ್ರವಾಸಿಗರಿಂದ ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ರೈಲಿನ ಚಾಲನೆಯ ಮೊದಲ ದಿನವೇ ಎಲ್ಲಾ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿದ್ದು, ಭಾರತದ ಗಣ್ಯರೊಂದಿಗೆ ಸ್ಪೇನ್ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ವಿದೇಶಿ ಅತಿಥಿಗಳು ಈ ರಾಜವೈಭವದ ಪಯಣದಲ್ಲಿ ಸಾಗುತ್ತಿದ್ದಾರೆ. ಐಆರ್‌ಸಿಟಿಸಿ (IRCTC) ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಜಂಟಿಯಾಗಿ ಈ ಅತಿಥಿ ಸತ್ಕಾರದ ಜವಾಬ್ದಾರಿಯನ್ನು ಹೊತ್ತುಕೊಂಡಿವೆ.
ಅರಮನೆಗಳ ಶೈಲಿಯ ವಿನ್ಯಾಸ
ಮೈಸೂರಿನ ಪ್ರಸಿದ್ಧ ರೈಲ್ವೆ ಕಾರ್ಯಾಗಾರದಲ್ಲಿ ಈ ರೈಲನ್ನು ಅತ್ಯಾಧುನಿಕವಾಗಿ ತಾಂತ್ರಿಕ ನವೀಕರಣಕ್ಕೆ ಒಳಪಡಿಸಲಾಗಿದೆ. ಈ ಹಿಂದೆ ಕೇವಲ ನಿದ್ರಿಸುವ ವ್ಯವಸ್ಥೆ ಹೊಂದಿದ್ದ ಕೋಣೆಗಳನ್ನು, ಪ್ರಸ್ತುತ ರಾಜಮನೆತನದ ಮಾದರಿಯಲ್ಲಿ ಪ್ರತ್ಯೇಕ ‘ಲಿವಿಂಗ್ ರೂಮ್’ ಹಾಗೂ ‘ಬೆಡ್ ರೂಮ್’ ಆಗಿ ವಿಂಗಡಿಸಲಾಗಿದೆ. ದಕ್ಷಿಣ ಭಾರತವನ್ನು ಆಳಿದ ಹೊಯ್ಸಳ, ಚಾಲುಕ್ಯ ಮತ್ತು ವಿಜಯನಗರ ಸಾಮ್ರಾಜ್ಯದ ಭವ್ಯ ವಾಸ್ತುಶಿಲ್ಪದ ಥೀಮ್ ಆಧಾರದ ಮೇಲೆ ಹೊಳೆಯುವ ಶ್ರೀಗಂಧದ ಬಣ್ಣದ ಮರದ ಒಳಾಂಗಣ ವಿನ್ಯಾಸದೊಂದಿಗೆ ಇಡೀ ರೈಲನ್ನು ನವವಧುವಿನಂತೆ ಸಜ್ಜುಗೊಳಿಸಲಾಗಿದೆ.
ಏನೆಲ್ಲಾ ಸೌಲಭ್ಯಗಳಿವೆ?
ಒಟ್ಟು 40 ಸುಸಜ್ಜಿತ ಅತ್ಯಾಧುನಿಕ ಕ್ಯಾಬಿನ್‌ಗಳಿದ್ದು, ಏಕಕಾಲಕ್ಕೆ 80 ಅತಿಥಿಗಳಿಗೆ ರಾಜಾತಿಥ್ಯ ನೀಡಬಹುದು. ವಿಕಲಚೇತನರಿಗಾಗಿ ವಿಶೇಷ ಕ್ಯಾಬಿನ್ ಇದ್ದು, ಪ್ರತಿಯೊಂದರಲ್ಲೂ ಸ್ಮಾರ್ಟ್ ಟಿವಿ ಹಾಗೂ ಹೈ-ಸ್ಪೀಡ್ ವೈ-ಫೈ ವ್ಯವಸ್ಥೆ ಇದೆ.
ಜಾಗತಿಕ ಹಾಗೂ ತರಹೇವಾರಿ ಭಾರತೀಯ ಆಹಾರ ಶೈಲಿಯನ್ನು ಉಣಬಡಿಸಲು ಎರಡು ರೆಸ್ಟೋರೆಂಟ್‌ಗಳಿವೆ. ಇದೇ ಮೊದಲ ಬಾರಿಗೆ ಪ್ರವಾಸಿಗರ ಬೇಡಿಕೆಯಂತೆ ‘ಜೈನ್ ಆಹಾರ’ ಹಾಗೂ ‘ಗ್ಲುಟನ್-ಮುಕ್ತ’ ವಿಶೇಷ ಖಾದ್ಯಗಳ ಮೆನುವನ್ನು ಪರಿಚಯಿಸಲಾಗಿದೆ.
ಪ್ರೀಮಿಯಂ ಪಾನೀಯಗಳಿಗಾಗಿ ‘ಮದಿರಾ’ ಲೌಂಜ್ ಬಾರ್ ಸೌಲಭ್ಯವಿದ್ದು, ಪ್ರಯಾಣಿಕರ ದೈಹಿಕ ರಿಲ್ಯಾಕ್ಸ್ ಹಾಗೂ ಫಿಟ್‌ನೆಸ್‌ಗಾಗಿ ಸಾಂಪ್ರದಾಯಿಕ ಆಯುರ್ವೇದ ಥೆರಪಿ ಒಳಗೊಂಡ ‘ಆರೋಗ್ಯ ಸ್ಪಾ ಮತ್ತು ಜಿಮ್ ಸೆಂಟರ್’ ಕಾರ್ಯನಿರ್ವಹಿಸಲಿದೆ.
ಇಡೀ ರೈಲಿನಲ್ಲಿ ಸಿಸಿಟಿವಿ ಕಣ್ಗಾವಲು ಹಾಗೂ ಅತ್ಯಾಧುನಿಕ ಆಟೋಮ್ಯಾಟಿಕ್ ಅಗ್ನಿಶಾಮಕ ಅಲಾರಾಂ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಇದನ್ನೂ ಓದಿ:
ಕರ್ನಾಟಕದ ಹೆಮ್ಮೆಯ ಐತಿಹಾಸಿಕ ಯಾತ್ರೆ
ಈ ಪ್ರವಾಸಿ ಋತುವಿನಲ್ಲಿ ಒಟ್ಟು 13 ಐಷಾರಾಮಿ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದ್ದು, 5 ರಾತ್ರಿಗಳು ಹಾಗೂ 6 ದಿನಗಳ ಅವಧಿಯ “ಪ್ರೈಡ್ ಆಫ್ ಕರ್ನಾಟಕ” ಪ್ರವಾಸ ಇದಾಗಿದೆ. ಈ ಪಯಣದಲ್ಲಿ ಅತಿಥಿಗಳು ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಬೇಲೂರು-ಹಳೇಬೀಡಿನ ಶಿಲ್ಪಕಲೆ, ಚಿಕ್ಕಮಗಳೂರಿನ ಹಚ್ಚಹಸಿರಿನ ಕಾಫಿ ತೋಟಗಳು, ವಿಶ್ವ ಪರಂಪರೆಯ ತಾಣ ಹಂಪಿ ಹಾಗೂ ಗೋವಾದ ಪ್ರಸಿದ್ಧ ಕರಾವಳಿ ತೀರಗಳನ್ನು ಅತ್ಯಂತ ಐಷಾರಾಮಿಯಾಗಿ ವೀಕ್ಷಿಸಲಿದ್ದಾರೆ. ಈ ಎಲ್ಲಾ ಪ್ರವಾಸಗಳು ಬೆಂಗಳೂರಿನಿಂದಲೇ ಆರಂಭವಾಗಿ ಬೆಂಗಳೂರಿನಲ್ಲಿಯೇ ಮುಕ್ತಾಯಗೊಳ್ಳುತ್ತವೆ.



