ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ಈಗ ಆಂಧ್ರಪ್ರದೇಶದ ಕರಾವಳಿ ಭಾಗದ ಜನರಲ್ಲಿ ತಲ್ಲಣ ಮೂಡಿಸಿದೆ. ಈ ವಾಯುಭಾರ ಕುಸಿತವು ಮುಂದಿನ 48 ಗಂಟೆಗಳಲ್ಲಿ ಚಂಡಮಾರುತವಾಗಿ ಬದಲಾಗಲಿದ್ದು, ಅಕ್ಟೋಬರ್ 28ರಂದು ರಾಜ್ಯದ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಭಾನುವಾರ ಮುನ್ನೆಚ್ಚರಿಕೆ ನೀಡಿದೆ.
ಕರಾವಳಿ ಭಾಗದ ಜನರು ಮುಂದಿನ ಕೆಲವು ದಿನಗಳ ಕಾಲ ಜಾಗರೂಕರಾಗಿರಬೇಕು ಎಂದು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಪ್ರಖರ್ ಜೈನ್ ಅವರು ತಿಳಿಸಿದ್ದಾರೆ.
ಚಂಡಮಾರುತದ ಚಲನೆ
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಈ ವಾಯುಭಾರ ಕುಸಿತವು ಭಾನುವಾರ ಮುಂಜಾನೆ ವಿಶಾಖಪಟ್ಟಣದಿಂದ 880 ಕಿ.ಮೀ ಮತ್ತು ಕಾಕಿನಾಡದಿಂದ 980 ಕಿ.ಮೀ ದೂರದಲ್ಲಿತ್ತು. ಹವಾಮಾನ ಇಲಾಖೆಯ ಪ್ರಕಾರ, ಇದು ಅಕ್ಟೋಬರ್ 26ರ ಸೋಮವಾರ ಮುಂಜಾನೆ ವೇಳೆಗೆ ಸಾಮಾನ್ಯ ಚಂಡಮಾರುತವಾಗಿ ಬದಲಾಗಲಿದೆ. ನಂತರ ಅಕ್ಟೋಬರ್ 27ರ ಮಂಗಳವಾರ ಮುಂಜಾನೆ ಇದು ಮತ್ತಷ್ಟು ಬಲಿಷ್ಠಗೊಂಡು ಭೀಕರ ಚಂಡಮಾರುತದ ರೂಪ ಪಡೆಯಲಿದೆ. ಕೊನೆಗೆ ಅಕ್ಟೋಬರ್ 28ರ ಬುಧವಾರ ಮುಂಜಾನೆ ವೇಳೆಗೆ ಇದು ತೀವ್ರ ಸ್ವರೂಪ ಪಡೆದು ಚಂಡಮಾರುತವಾಗಿ ಆಂಧ್ರದ ಕರಾವಳಿ ತೀರದತ್ತ ನುಗ್ಗಿ ಬರಲಿದೆ.
ಗಂಟೆಗೆ 140 ಕಿ.ಮೀ ವೇಗದ ಬಿರುಗಾಳಿ
ಅಕ್ಟೋಬರ್ 28ರ ಬುಧವಾರ ಮಧ್ಯಾಹ್ನದ ಒಳಗಾಗಿ ಈ ಚಂಡಮಾರುತವು ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಇರುವ ಯಾಣಂ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಈ ವೇಳೆ ಕರಾವಳಿ ಭಾಗದಲ್ಲಿ ಸೃಷ್ಟಿಯಾಗುವ ಬಿರುಗಾಳಿಯ ವೇಗ ಊಹೆಗೂ ನಿಲುಕದಂತಿರಲಿದ್ದು, ಸಾಮಾನ್ಯವಾಗಿ ಗಂಟೆಗೆ 115 ರಿಂದ 125 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯು, ಕೆಲವೊಮ್ಮೆ ಗಂಟೆಗೆ 140 ಕಿ.ಮೀ ವೇಗ ಪಡೆಯಲಿದೆ ಎಂದು ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ:
ಜನರ ರಕ್ಷಣೆಗೆ ಆಡಳಿತ ಸನ್ನದ್ಧ
ಚಂಡಮಾರುತ ತೀರ ದಾಟುವ ವೇಳೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತಗಳು ಈಗಾಗಲೇ ಸಿದ್ಧತೆ ನಡೆಸಿವೆ. ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.



