October 24, 2026
Saturday, October 24, 2026
spot_img

ಗದಗದಿಂದ ನಾಪತ್ತೆ, ಮುಂಬೈನಲ್ಲಿ ಪತ್ತೆ: 40 ದಿನಗಳ ಬಳಿಕ ಮನೆಗೆ ಮರಳಿದ ಪರ್ವೀಜ್

ಹೊಸದಿಗಂತ ವರದಿ ಗದಗ:

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಪರ್ವೀಜ್ ಧಾರವಾಡ ಅವರು 40 ದಿನಗಳ ಬಳಿಕ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮುಂಬೈನಿಂದ ಗದಗ ನಗರಕ್ಕೆ ಕರೆದುಕೊಂಡು ಬಂದ ಪೊಲೀಸರು ವಿಚಾರಣೆ ನಡೆಸಿ ಅಧಿಕಾರಿಯನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ.

ಅ. 13ರಂದು ಕಚೇರಿ ಕೆಲಸ ಎಂದು ಹೇಳಿ ಗದಗದಿಂದ ಬೆಂಗಳೂರಿಗೆ ತೆರಳಿದ್ದ ಪರ್ವಿಜ್ ಅಲ್ಲಿಂದ ನಾಪತ್ತೆಯಾಗಿದ್ದರು. ಕೆಆರ್‌ಐಡಿಎಲ್ ಬೆಳಗಾವಿ ವಿಭಾಗದ ಎಂಡಿಗೆ ಬರೆದಿರುವ ಪತ್ರ ಬಹಿರಂಗವಾಗಿ ನಾಪತ್ತೆ ಕೇಸ್ ಭಾರೀ ಚರ್ಚೆಗೆ ಕಾರಣವಾಗಿತ್ತು.

ಪತ್ರದಲ್ಲಿ ಸರ್ಕಾರದಿಂದ ಅನುದಾನ ಬಂದಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಸಾಧ್ಯವಾಗ್ತಿಲ್ಲ. ತೀವ್ರ ಒತ್ತಡಕ್ಕೊಳಗಾಗಿ ಮನೆ ಬಿಟ್ಟು ಹೋಗುತ್ತಿದ್ದೇನೆ. ಜೀವ ಅಂತ್ಯ ಗೊಳಿಸಿಕೊಳ್ಳುತ್ತಿದ್ದೇನೆ ಎಂದು ಪರ್ವೀಜ್ ಪತ್ರ ಬರೆದಿದ್ದರು.

ಇದನ್ನೂ ಓದಿ:

ಅನುದಾನದ ಕೊರತೆ ವಿಚಾರ ರಾಜಕೀಯವಾಗಿಯೂ ಭಾರೀ ಚರ್ಚೆಗೆ ಕಾರಣವಾಗಿದ್ದ ಪ್ರಕರಣ ವಿರೋಧ ಪಕ್ಷದ ನಾಯಕರು, ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಆಗದಂತ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಿದೆಯೆಂದು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರು. ನಂತರ ಅಧಿಕಾರಿ ನಾಪತ್ತೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಪರ್ವೀಜ್ ವಿರುದ್ಧ ಆರ್ಥಿಕ ಅವ್ಯವಹಾರದ ಆರೋಪಗಳಿವೆ ಎಂಬ ಹೇಳಿಕೆ ನೀಡಿದ್ದರು.

ಉಜ್ಜನಿಯ ದರ್ಗಾ, ಹರಿಯಾಣಾದ ಪಾಣಿಪತ್ ದರ್ಗಾಗಳಿಗೆ ಭೇಟಿ ನೀಡಿದ್ದ ಪರ್ವೀಜ್ ಅಲ್ಲಲ್ಲಿ ಹೋಟೆಲ್ ಗಳಲ್ಲೂ ವಾಸ್ತವ್ಯ ಮಾಡಿ, ಅಲ್ಲಿನ ಫ್ರೀ ವೈ-ಫೈ ಬಳಸಿ ಮೇಲ್ ಚೆಕ್ ಮಾಡಿ ಮತ್ತೆ ಮುಂದೆ ಪ್ರಯಾಣ ಬೆಳೆಸಿದ್ದರು. ಪಾಣಿಪತ್‌ನಿಂದ ಉತ್ತರಾಖಂಡ ಕೂರ್ತಿಗೆ ಹೋಗಿ ಅಲ್ಲಿಂದ ಮುಂಬೈಗೆ ಬಂದು ದರ್ಗಾ ದರುಶನಮಾಡಿದ್ದರು. ಅಲ್ಲಿಂದ ಮತ್ತೆ ಬೇರೆಡೆ ಹೋಗಬೇಕು ಎನ್ನುವಷ್ಟರಲ್ಲಿ ಗದಗ ಪೊಲೀಸರು ಪರ್ವೀಜ್ ಅವರನ್ನು ವಶಕ್ಕೆ ಪಡೆದಿದ್ದಾರೆ.

Must Read