ಹೊಸದಿಗಂತ ವರದಿ ಚಿತ್ರದುರ್ಗ:
ಹೆತ್ತವರ ಮಡಿಲಲ್ಲಿ ಬೆಚ್ಚಗಿರಬೇಕಾದ ನವಜಾತ ಹೆಣ್ಣು ಶಿಶುವೊಂದನ್ನು ಚೀಲದಲ್ಲಿ ಹಾಕಿ ಕೆರೆಯ ಬಳಿ ಬಿಟ್ಟುಹೋದ ಅಮಾನವೀಯ ಘಟನೆ ಚಿತ್ರದುರ್ಗ ಸಮೀಪದ ಗೋನೂರು ಗ್ರಾಮದಲ್ಲಿ ನಡೆದಿದೆ.
ಅದೃಷ್ಟವಶಾತ್ ಮಗುವಿನ ಅಳುವಿನ ಧ್ವನಿ ಕೇಳಿ ಸ್ಥಳಕ್ಕೆ ಧಾವಿಸಿದ ಜ್ಞಾನಮೂರ್ತಿ ಮತ್ತು ಲಕ್ಷ್ಮೀದೇವಿ ದಂಪತಿ, ಶಿಶುವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಸಮಯಕ್ಕೆ ಸರಿಯಾಗಿ ಸಿಕ್ಕ ನೆರವಿನಿಂದ ಪುಟ್ಟ ಕಂದಮ್ಮ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಕೀರಲು ಧ್ವನಿಯಿಂದ ಬೆಳಕಿಗೆ ಬಂದ ಘಟನೆ
ಕೆರೆಯ ಪಕ್ಕದ ನಿವಾಸಿ ಜ್ಞಾನಮೂರ್ತಿ ನೀರಿನ ಹರಿವನ್ನು ನೋಡಲು ತೆರಳಿದ್ದಾಗ ಮಗುವಿನ ಅಳುವಿನ ಸದ್ದು ಕೇಳಿಸಿದೆ. ಮೊದಲಿಗೆ ನಾಯಿ ಮರಿಗಳನ್ನು ಯಾರೋ ಬಿಟ್ಟು ಹೋಗಿರಬಹುದು ಎಂದು ಭಾವಿಸಿದ ಅವರು, ಹತ್ತಿರ ಹೋಗಿ ಚೀಲವನ್ನು ಪರಿಶೀಲಿಸಿದಾಗ ಅದರೊಳಗೆ ನವಜಾತ ಹೆಣ್ಣು ಶಿಶು ಇರುವುದು ಕಂಡುಬಂದಿದೆ. ತಕ್ಷಣ ಪತ್ನಿ ಲಕ್ಷ್ಮೀದೇವಿಯನ್ನು ಕರೆದು ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ.
ಮಗುವನ್ನು ಮನೆಗೆ ಕರೆದೊಯ್ದ ದಂಪತಿ, ಅದನ್ನು ಸ್ವಚ್ಛಗೊಳಿಸಿ ಬೆಚ್ಚಗಿರಿಸಿದ್ದಾರೆ. ಮನೆಯಲ್ಲಿದ್ದ ಚಿಕ್ಕ ಮಗುವಿನ ಉಡುಪನ್ನು ತೊಡಿಸಿ, ಹಾಲುಣಿಸಿ ಸಂತೈಸಿದ್ದಾರೆ. ಶಿಶು ಪತ್ತೆಯಾದ ಸುದ್ದಿ ಗ್ರಾಮದಲ್ಲಿ ಕ್ಷಣಾರ್ಧದಲ್ಲೇ ಹರಡಿದ್ದು, ಮಗುವನ್ನು ನೋಡಲು ಜನರು ಗುಂಪುಗುಂಪಾಗಿ ಮನೆಯ ಮುಂದೆ ಸೇರಿದ್ದಾರೆ.
ಮಗುವನ್ನು ಸಾಕುವ ಆಸೆ ವ್ಯಕ್ತಪಡಿಸಿದ ಲಕ್ಷ್ಮೀದೇವಿ
ಮಾಹಿತಿ ತಿಳಿದ ಅಂಗನವಾಡಿ ಕಾರ್ಯಕರ್ತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಶಿಶುವನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಲಕ್ಷ್ಮೀದೇವಿ ಅವರ ಕುಟುಂಬದಲ್ಲಿ ಇಬ್ಬರು ಗಂಡು ಮೊಮ್ಮಕ್ಕಳಿದ್ದು, ಎರಡನೆಯ ಮಗುವಿಗೆ ಎರಡೂವರೆ ತಿಂಗಳಾಗಿದೆ. ಕುಟುಂಬದಲ್ಲಿ ಹೆಣ್ಣುಮಗು ಇಲ್ಲದ ಕಾರಣ, ಕೆರೆಯ ಬಳಿ ಸಿಕ್ಕ ಶಿಶುವನ್ನು ತಾವೇ ಸಾಕಿ ಬೆಳೆಸುವ ಆಸೆ ಇತ್ತು ಎಂದು ಲಕ್ಷ್ಮೀದೇವಿ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಮಗುವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಮಮತೆಯೇ ಮಗುವಿಗೆ ಜೀವದಾನ
ರಾತ್ರಿ ಮಳೆ ಬಾರದಿದ್ದುದರಿಂದ ಹಾಗೂ ನಾಯಿಗಳ ಕಣ್ಣಿಗೆ ಬೀಳದಿದ್ದುದರಿಂದ ಮಗು ಬದುಕುಳಿದಿದೆ ಎಂದು ಲಕ್ಷ್ಮೀದೇವಿ ಅವರ ಪುತ್ರಿ ಪ್ರಿಯಾಂಕ ತಿಳಿಸಿದ್ದಾರೆ. ಸಂಕಷ್ಟದಲ್ಲಿದ್ದ ಶಿಶುವಿಗೆ ತಕ್ಷಣ ನೆರವಾದ ಕುಟುಂಬದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮಗುವಿನ ಸುರಕ್ಷತೆ ಮತ್ತು ಭವಿಷ್ಯದ ಆರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಆಶಯವೂ ವ್ಯಕ್ತವಾಗಿದೆ.



