October 26, 2026
Monday, October 26, 2026
spot_img

ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಎಸ್ಕೇಪ್‌: ಮನೆ ಮುಂದೆ ಧರಣಿ ಕುಳಿತ ಯುವತಿ

ಹೊಸದಿಗಂತ ವರದಿ ಹಾಸನ

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ ಹುಡುಗನ ಮನೆ ಮುಂದೆ ಹುಡುಗಿ ಧರಣಿ ಕುಳಿತಿರುವ ಘಟನೆ ಹಾಸನದಲ್ಲಿ ನಡೆದಿದೆ.

ಚನ್ನರಾಯಪಟ್ಟಣದ ಕಲ್ಲೆಸೋನಹಳ್ಳಿಯಲ್ಲಿರುವ ಪ್ರಿಯಕರನ ಮನೆಯ ಮುಂದೆ ಯುವತಿ ನಿಷ್ಮಾ ಹಗಲು ರಾತ್ರಿ ಎನ್ನದೇ ಧರಣಿ ಕುಳಿತಿದ್ದಾಳೆ. ಮೋಸ ಮಾಡಿರುವ ಆರೋಪ ಹೊತ್ತಿರುವ ಸೂರ್ಯ ಹಾಗೂ ನಿಷ್ಮಾ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಐದು ತಿಂಗಳಿನಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಸೂರ್ಯ ಹಾಗೂ ನಿಷ್ಮಾ ಪೋಷಕರು ಮದುವೆಗೆ ಒಪ್ಪಿಗೆ ನೀಡಿದ್ದರು.

ಇಷ್ಟೆಲ್ಲಾ ನಡೆದ ನಂತರ ದಿಢೀರ್‌ ಸೂರ್ಯ ನಾಪತ್ತೆಯಾಗಿದ್ದಾನೆ. ಸೆ. 24 ರಿಂದ ಸೂರ್ಯ ನಾಪತ್ತೆಯಾಗಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ. ಸೂರ್ಯ ನಾಪತ್ತೆಯಾಗಿರುವ ಕಾರಣ ಮನನೊಂದಿದ್ದ ನಿಷ್ಮಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಚಿಕಿತ್ಸೆ ನಂತರ ನಿಷ್ಮಾ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಸೂರ್ಯ ಮನೆಯ ಕಟ್ಟೆಯ ಮೇಲೆ ಕುಳಿತಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ನಿಷ್ಮಾ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದಾಗಿ ಇಪ್ಪತ್ತು ದಿನಗಳು ಕಳೆದರೂ ಯುವಕ ಪತ್ತೆಯಾಗಿಲ್ಲ. ಪೊಲೀಸ್‌ ಠಾಣೆಗೆ ಸೂರ್ಯ ಪೋಷಕರನ್ನು ಪೊಲೀಸರು ಕರೆಸಿದ ವೇಳೆ ಭಾನುವಾರದ ಒಳಗೆ ಮಗ ಎಲ್ಲಿದ್ದರೂ ಕರೆತರುತ್ತೇವೆ ಎಂದು ಸೂರ್ಯ ಪೋಷಕರು ಮಾತು ನೀಡಿದ್ದಾರೆ. ಆದರೆ ಇದೀಗ ಮನೆಗೆ ಬೀಗ ಹಾಕಿ ಇಡೀ ಕುಟುಂಬವೇ ನಾಪತ್ತೆಯಾಗಿದೆ.

ಚಳಿ, ಮಳೆ ಯಾವುದನ್ನೂ ಲೆಕ್ಕಿಸದೇ ನಿಷ್ಮಾ ಬೀಗ ಹಾಕಿರುವ ಮನೆಯ ಮುಂದೆಯೇ ಕುಳಿತು ಪ್ರತಿಭಟಿಸುತ್ತಿದ್ದಾರೆ. ಕಂಪನಿಯಲ್ಲಿ ಒಟ್ಟಿಗೇ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೀತಿ ಮೂಡಿದ್ದು, ಒಂದೇ ಮನೆಯಲ್ಲಿ ಐದು ತಿಂಗಳು ವಾಸವಾಗಿದ್ದಾರೆ. ನ್ಯಾಯ ಸಿಗುವವರೆಗೂ ಕದಲುವುದಿಲ್ಲ ಎಂದು ನಿಷ್ಮಾ ಹೇಳಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read