October 26, 2026
Monday, October 26, 2026
spot_img

ಕಾಫಿ ಕಪ್‌ಗೂ ಬಂತು ಲವ್ ರಿಲೇಷನ್‌ಶಿಪ್ ಟ್ವಿಸ್ಟ್: ಸೋಶಿಯಲ್ ಮೀಡಿಯಾ ಹುಚ್ಚಾಟಕ್ಕೆ ವಿಜಯ್ ಮಾಸ್ ರಿಪ್ಲೈ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳ್ಳಿಪರದೆಯ ಯಶಸ್ಸಿನ ಜೊತೆಗೆ ವೈಯಕ್ತಿಕ ಜೀವನದ ಚರ್ಚೆಗಳಿಂದಲೇ ಸುದ್ದಿಯಲ್ಲಿರುವ ಜೋಡಿ ಅಂದರೆ ಅದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ. ಇತ್ತೀಚೆಗೆ ಇಬ್ಬರು ಒಟ್ಟಿಗೆ ನಟಿಸಿರುವ ‘ರಣಬಾಲಿ’ ಸಿನಿಮಾದ ಪ್ರಚಾರ ಕಾರ್ಯಕ್ರಮಗಳು ಮತ್ತು ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋಗೆ ಬಂದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ. ಶೋ ನೋಡಿ ಸಿನಿಮಾ ಪ್ರೇಕ್ಷಕರು ಸುಮ್ಮನಾಗಿದ್ದರೆ ಕಥೆ ಬೇರೆಯೇ ಇರುತ್ತಿತ್ತು. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಇವರ ಬಾಂಧವ್ಯದ ಬಗ್ಗೆ ನಡೆದ ವಿಶ್ಲೇಷಣೆಗಳು ಮಿತಿಮೀರಿದ್ದವು.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಂದಕ್ಕೂ ವಿಶ್ಲೇಷಣೆ ಮಾಡುವ ‘ಇನ್ಸ್ಟಾಗ್ರಾಮ್ ಸೈಕಾಲಜಿಸ್ಟ್’ಗಳ ಸಂಖ್ಯೆ ಹೆಚ್ಚಾಗಿದೆ. ಕರಣ್ ಜೋಹರ್ ಶೋನಲ್ಲಿ ವಿಜಯ್ ದೇವರಕೊಂಡ ಸೋಫಾದ ಬಲಬದಿಯಲ್ಲಿ ಕುಳಿತಿದ್ದೇಕೆ? ರಶ್ಮಿಕಾ ಕೈಯಲ್ಲಿ ಕಾಫಿ ಕಪ್ ಇಲ್ಲದಿರಲು ವಿಜಯ್ ಅವರೇ ಕಾರಣವೇ? ವಿಜಯ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ರಶ್ಮಿಕಾರನ್ನು ಫಾಲೋ ಮಾಡುತ್ತಿಲ್ಲವೇಕೆ? ಎಂಬಿತ್ಯಾದಿ ಸಣ್ಣ ಸಣ್ಣ ವಿಷಯಗಳನ್ನೇ ಹಿಡಿದುಕೊಂಡು, ವಿಜಯ್ ಅವರನ್ನು ‘ಅಹಂಕಾರಿ’ ಹಾಗೂ ‘ರೆಡ್ ಫ್ಲ್ಯಾಗ್’ ಎಂದು ಟ್ರೋಲ್ ಮಾಡಲಾಗುತ್ತಿತ್ತು.

https://www.instagram.com/reel/De6jRo5hH4c/?utm_source=ig_web_button_share_sheet

ತಮ್ಮ ಮೇಲಿನ ಈ ಉಚಿತ ವಿಶ್ಲೇಷಣೆಗಳಿಗೆ ವಿಜಯ್ ಕೋಪಗೊಳ್ಳಲಿಲ್ಲ, ಬದಲಿಗೆ ನಕ್ಕು ಸುಮ್ಮನಾದರು. ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಅನಿರುದ್ಧ್ ನಾರಾಯಣಂ ಎಂಬುವವರು ಇಂತಹ ಸೋಶಿಯಲ್ ಮೀಡಿಯಾ ಸೈಕಾಲಜಿಸ್ಟ್‌ಗಳನ್ನು ಅಣಕಿಸಿ ಮಾಡಿದ ‘Those Insta Psychologists Analysing the Show!’ ಎಂಬ ಹಾಸ್ಯಭರಿತ ವೀಡಿಯೋವನ್ನು ವಿಜಯ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. “ಇದಕ್ಕೆ ಪ್ರಾದೇಶಿಕ ಭಾಷೆಗಳ ಸಬ್‌ಟೈಟಲ್ಸ್ ಬೇಕು” ಎಂದು ತಮಾಷೆಯಾಗಿ ಬರೆದು, ವಿಮರ್ಶಕರಿಗೆ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.

ವಿಜಯ್ ಈ ವೀಡಿಯೋ ಶೇರ್ ಮಾಡುತ್ತಿದ್ದಂತೆಯೇ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು. “ಇಡೀ ವಿವಾದಕ್ಕೆ ಸೂಕ್ತ ಹಾಗೂ ಪ್ರಬುದ್ಧ ಉತ್ತರ ಇದು” ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಚಿಕ್ಕ ವಿಷಯಗಳಿಗೂ ನೆಗಟಿವ್ ಟೀಕೆ ಮಾಡುವ ಸೋಶಿಯಲ್ ಮೀಡಿಯಾ ಕಾಲದಲ್ಲಿ, ತಮಗೆ ಬಂದ ವಿಮರ್ಶೆಯನ್ನು ಸಕಾರಾತ್ಮಕವಾಗಿ ಹಾಗೂ ಹಾಸ್ಯಮಯವಾಗಿ ಸ್ವೀಕರಿಸಿ ವಿಜಯ್ ದೇವರಕೊಂಡ ಎಲ್ಲರ ಗಮನ ಸೆಳೆದಿದ್ದಾರೆ.

Must Read