ಹೊಸದಿಗಂತ ವರದಿ ಬೆಳಗಾವಿ:
ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ದಾರಿ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮೇಲಿದೆ. ರೈತರನ್ನು ಕಾಪಾಡುವ ಉದ್ದೇಶದಿಂದಲೇ ಸರ್ಕಾರ ಮಧ್ಯಪ್ರವೇಶಿಸಿದೆ ಎಂದರು.
ರೈತರು ಬೇಡಿಕೆ ಇಟ್ಟಿರುವ ಎಂಎಸ್ಪಿ, ಎಫ್ಆರ್ಪಿ ಹಾಗೂ ಎಸ್ಎಪಿ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೂ ಚರ್ಚಿಸಿದ್ದೇನೆ. ರೈತರ ಹೋರಾಟದ ಸ್ಥಳಕ್ಕೂ ಭೇಟಿ ನೀಡಿದ್ದೇನೆ. ಕಳೆದ ಹತ್ತು ವರ್ಷಗಳಿಂದ ಸಕ್ಕರೆ ದರ ಏರಿಕೆಯಾಗಿಲ್ಲ ಎಂದು ಕಾರ್ಖಾನೆಗಳ ಮಾಲೀಕರು ಹೇಳುತ್ತಿದ್ದು, ಕ್ವಿಂಟಾಲ್ಗೆ ₹6 ಸಾವಿರ ದರ ನಿಗದಿಪಡಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.
ಇದು ರಾಜಕೀಯ ಸಭೆಯಲ್ಲ. ರಾಜಕೀಯ ಮಾಡಲು ಬೇರೆ ವೇದಿಕೆಗಳಿವೆ. ಸದ್ಯ ರೈತರ ಬದುಕುಳಿಸುವುದೇ ಮುಖ್ಯ. ಈ ವರ್ಷ ಕಬ್ಬಿನ ಇಳುವರಿಯೂ ಕಡಿಮೆಯಾಗಿದೆ. ಸರ್ಕಾರ ಯಾರ ಪರವೂ ಇಲ್ಲ. ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಹಾಗೂ ಎಲ್ಲ ವರ್ಗದ ಜನರಿಗೆ ಅನುಕೂಲವಾಗಬೇಕು. ಹೀಗಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಚರ್ಚಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಅಡ್ವೊಕೇಟ್ ಜನರಲ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ರೈತರ ಹಿತದೃಷ್ಟಿಯಿಂದ ಕಾರ್ಖಾನೆಗಳ ಮಾಲೀಕರು ಕಾಳಜಿ ವಹಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.



