October 26, 2026
Monday, October 26, 2026
spot_img

ನಾಳೆ SIR ಫೈನಲ್ ಲಿಸ್ಟ್: ರಾಜ್ಯದ ಕೋಟ್ಯಂತರ ಮತದಾರರ ಭವಿಷ್ಯ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

ಈ ಪ್ರಕ್ರಿಯೆಯಲ್ಲಿ ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಎಷ್ಟು ಹೆಸರುಗಳು ಅಂತಿಮವಾಗಿ ತೆಗೆದುಹಾಕಲ್ಪಡಲಿವೆ ಎಂಬುದು ಅಧಿಕೃತ ಪಟ್ಟಿ ಪ್ರಕಟವಾದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಭಾರತೀಯ ಚುನಾವಣಾ ಆಯೋಗವು ಜೂನ್ 20ರಂದು ಆರಂಭಿಸಿದ್ದ ಪರಿಷ್ಕರಣೆ ಕಾರ್ಯದಲ್ಲಿ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 24ರಂದು ಪ್ರಕಟಿಸಲಾಗಿತ್ತು. ಬಳಿಕ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಮತದಾರರಿಗೆ ತಮ್ಮ ಹಕ್ಕುಗಳನ್ನು ಮಂಡಿಸಲು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್‌ಗಳ ವಿಚಾರಣೆ ಮತ್ತು ವಿಲೇವಾರಿ ಪ್ರಕ್ರಿಯೆ ಕೈಗೊಂಡಿದ್ದಾರೆ.

ಕರಡು ಪಟ್ಟಿಯಲ್ಲಿ ಭಾರೀ ಇಳಿಕೆ

ಲಭ್ಯವಿರುವ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಒಟ್ಟು ಸುಮಾರು 5.54 ಕೋಟಿ ಮತದಾರರಿದ್ದರು. ಕರಡು ಪಟ್ಟಿಯಲ್ಲಿ 4.46 ಕೋಟಿ ಹೆಸರುಗಳು ಪ್ರಕಟವಾಗಿದ್ದವು. ಹೀಗಾಗಿ ಉಳಿದ ಹೆಸರುಗಳ ಸ್ಥಿತಿ ಮತ್ತು ಅಂತಿಮ ಪಟ್ಟಿಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮತದಾರರಲ್ಲಿ ಕುತೂಹಲ ಮೂಡಿದೆ. ಸುಮಾರು 43 ಲಕ್ಷ ಮ್ಯಾಪಿಂಗ್ ಆಗದ ಅಥವಾ ಗುರುತಿನ ಪರಿಶೀಲನೆ ಅಗತ್ಯವಿರುವ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಫಾರ್ಮ್ 6 ಮತ್ತು ಫಾರ್ಮ್ 7 ಮೂಲಕವೂ ಮತದಾರರ ಸೇರ್ಪಡೆ ಹಾಗೂ ಹೆಸರುಗಳ ಕುರಿತು ಆಕ್ಷೇಪಣೆಗಳಿಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗಿವೆ. ಬೆಂಗಳೂರಿನಲ್ಲಿಯೂ ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಗಳಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ನಗರದಲ್ಲಿ ಎಷ್ಟು ಹೆಸರುಗಳು ಉಳಿಯಲಿವೆ ಅಥವಾ ಕೈಬಿಡಲಾಗಲಿವೆ ಎಂಬುದನ್ನು ಅಂತಿಮ ಅಧಿಕೃತ ಅಂಕಿಅಂಶಗಳೇ ನಿರ್ಧರಿಸಲಿವೆ.

ಮತದಾರರು ಏನು ಮಾಡಬೇಕು?

ಅಂತಿಮ ಪಟ್ಟಿ ಪ್ರಕಟವಾದ ಬಳಿಕ ಮತದಾರರು ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ. ಹೆಸರು ಕಾಣಿಸದಿದ್ದರೆ ಚುನಾವಣಾ ಆಯೋಗದ ಅಧಿಕೃತ ವ್ಯವಸ್ಥೆ ಮೂಲಕ ಸೂಕ್ತ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಬಹುದು.

Must Read

Skip to toolbar