ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಉಪೇಂದ್ರ ಅವರ ಡೆಬ್ಯೂ ಸಿನಿಮಾ ಎ ಖ್ಯಾತಿಯ ನಿರ್ಮಾಪಕ ಸಿಲ್ಕ್ ಮಂಜು ಅವರು ಸೋಮವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಂಜು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿನಿಮಾಗಳ ಸತತ ಸೋಲಿನಿಂದಾಗಿ ಮಂಜು ಅವರಿಗೆ ಅನಾರೋಗ್ಯ ಕಾಡಿತ್ತು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮಂಜು ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.ಹಗಲು ವೇಷ, ಪ್ರತ್ಯರ್ಥ, A, ಸೂರ್ಯಕಾಂತಿ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಸೈಕಿಕ್, ಟೆರರ್ ಸೇರಿದಂತೆ ಹಲವು ಸಿನಿಮಾಗಳನ್ನು ಸಿಲ್ಕ್ ಮಂಜು ನಿರ್ಮಾಣ ಮಾಡಿದ್ದರು. ಉಪೇಂದ್ರ, ಶಿವರಾಜ್ಕುಮಾರ್, ದಿಗಂತ್, ರಮೇಶ್ ಅರವಿಂದ್, ಆ ದಿನಗಳು ಚೇತನ್ ಸೇರಿದಂತೆ ಸಾಕಷ್ಟು ಸ್ಟಾರ್ ಕಲಾವಿದರ ಸಿನಿಮಾಗಳನ್ನು ನಿರ್ಮಿಸಿದ ಜನಪ್ರಿಯತೆ ಇವರಿಗಿದೆ.
ಟೆರರ್ ಸಿನಿಮಾಗಾಗಿ ಮಂಜು ಎಂಟು ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಇದರಲ್ಲಿ ಮೂರು ಕೋಟಿ ರೂಪಾಯಿ ಸಾಲ ಮಾಡಲಾಗಿತ್ತು. ಮನೆಯನ್ನೂ ಅಡ ಇಡಲಾಗಿತ್ತು. ಆದರೆ ಸಿನಿಮಾ ಸೋತ ಕಾರಣ ಮಂಜು ದೊಡ್ಡ ಆರ್ಥಿಕ ನಷ್ಟ ಅನುಭವಿಸಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಆಸ್ಪತ್ರೆಯ ಬಿಲ್ ಕಟ್ಟಲೂ ಹಣ ಇಲ್ಲದಂತಾಗಿತ್ತು ಎಂದು ಕುಟುಂಬದವರು ಹೇಳಿದ್ದಾರೆ.
ಮಂಜು ಅವರ ನಿಧನಕ್ಕೆ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನೆರವೇರಲಿದೆ.



