October 27, 2026
Tuesday, October 27, 2026
spot_img

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ: 1.07 ಕೋಟಿ ರೂ. ಮೌಲ್ಯದ 537 ಮೊಬೈಲ್‌ಗಳು ಜಪ್ತಿ

ಹೊಸದಿಗಂತ ವರದಿ ವಿಜಯಪುರ:

ವಿಜಯಪುರ ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 1.07,40,000 ರೂ. ಮೌಲ್ಯದ 537 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಜಪ್ತಿಯಾದ ಮೊಬೈಲ್‌ಗಳನ್ನು ಸಂತ್ರಸ್ಥರಿಗೆ ಮರಳಿ ಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಮೊಬೈಲ್ ಫೋನ್ ಸಾರ್ವಜನಿಕರ ದೈನಂದಿನ ಜೀವನದಲ್ಲಿ ಅತ್ಯಂತ ಅಗತ್ಯ ಸಾಧನವಾಗಿದೆ. ಮೊಬೈಲ್ ಕಳ್ಳತನದ ಕುರಿತು ಸಾರ್ವಜನಿಕರಿಂದ ಪ್ರತಿದಿನ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿವೆ. ಈ ದೂರುಗಳ ಆಧಾರದ ಮೇಲೆ ಪೊಲೀಸ್ ಇಲಾಖೆ ಸಿಇಐಆರ್ ಪೋರ್ಟಲ್ ಬಳಸಿಕೊಂಡು ಮೊಬೈಲ್‌ಗಳ ಪತ್ತೆಗೆ ಕ್ರಮ ಕೈಗೊಳ್ಳುತ್ತಿದೆ.

ಸೆಂಟ್ರಲ್ ಎಕ್ಯೂಪಮೆಂಟ್ ಐಡೆಂಟಿಟಿ ರಿಜಿಸ್ಟ್ರರ್ ರ್ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು ರೂಪಿಸಿರುವ ಡಿಜಿಟಲ್ ವ್ಯವಸ್ಥೆಯಾಗಿದ್ದು, ಮೊಬೈಲ್ ಫೋನ್ ಕಳೆದುಹೋದಾಗ ಅಥವಾ ಕಳ್ಳತನವಾದಾಗ ಅದರ ಐಎಂಇಐ ಸಂಖ್ಯೆಯ ಸಹಾಯದಿಂದ ಸಾಧನವನ್ನು ಪತ್ತೆಹಚ್ಚಲು, ಬ್ಲಾಕ್ ಮಾಡಲು ಹಾಗೂ ಮರಳಿ ಪಡೆಯಲು ಈ ವ್ಯವಸ್ಥೆ ನೆರವಾಗುತ್ತದೆ ಎಂದರು.

ಈ ಪೋರ್ಟಲ್ ಮೂಲಕ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್‌ಗಳ ದುರುಪಯೋಗವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಮೊಬೈಲ್ ಕಳೆದುಕೊಂಡವರು ನೀಡುವ ದೂರುಗಳ ಆಧಾರದ ಮೇಲೆ ಪತ್ತೆ ಕಾರ್ಯ ಕೈಗೊಳ್ಳಲಾಗುತ್ತದೆ ಎಂದರು.

ಇದನ್ನೂ ಓದಿ:

ಜಿಲ್ಲೆಯ ಎಲ್ಲ 28 ಪೊಲೀಸ್ ಠಾಣೆಗಳಲ್ಲಿ ಈ ಪೋರ್ಟಲ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ದಾಖಲಾಗುವ ಮೊಬೈಲ್ ಕಳೆದುಹೋದ ಹಾಗೂ ಕಳ್ಳತನವಾದ ಪ್ರಕರಣಗಳನ್ನು ಪರಿಶೀಲಿಸಿ, ನಿಯಮಿತವಾಗಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಈವರೆಗೆ ಒಟ್ಟು 537 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳ ಅಂದಾಜು ಮೌಲ್ಯ 1,07,40,000 ಆಗಿದೆ ಎಂದರು.

ಮೊಬೈಲ್ ಪತ್ತೆ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಸಿಇಐಆರ್ ಪೋರ್ಟಲ್‌ನ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದರು.

ಡಿವೈಎಸ್‌ಪಿ ನಾಗರಾಜ್, ಚಂದ್ರಕಾಂತ ನಂದರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Must Read

Skip to toolbar