ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಸ್ಕರಣಾಗಾರ ಕ್ಷೇತ್ರದ ನಾವೀನ್ಯತೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ರಾಷ್ಟ್ರೀಯ ಮಟ್ಟದ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಹೈ ಟೆಕ್ನಾಲಜಿ (ಸಿಎಚ್ಟಿ) ಸಂಸ್ಥೆಯ 2025–26ನೇ ಸಾಲಿನ ನಾವೀನ್ಯತಾ ಪ್ರಶಸ್ತಿಗಳಲ್ಲಿ ಎಂಆರ್ಪಿಎಲ್ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ.
ಗೋವಾದ ಎಟಿಐ–ಒಎನ್ಜಿಸಿ ಸಭಾಂಗಣದಲ್ಲಿ ಅಕ್ಟೋಬರ್ 27ರಂದು ನಡೆದ 29ನೇ ಇಂಧನ ತಂತ್ರಜ್ಞಾನ ಮತ್ತು ನಾವೀನ್ಯತಾ ಸಮಾವೇಶ (ಇಟಿಎಂ–2026)ದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪೆಟ್ರೋಲಿಯಂ ಸಂಸ್ಕರಣಾಗಾರಗಳಲ್ಲಿ ತಾಂತ್ರಿಕ ಸಾಧನೆ ಮತ್ತು ನಾವೀನ್ಯತೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.
ಸ್ವದೇಶಿ ತಂತ್ರಜ್ಞಾನಕ್ಕೆ ಮನ್ನಣೆ
ಎಂಆರ್ಪಿಎಲ್ಗೆ ‘ಅತ್ಯುತ್ತಮ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿ’ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಇಸೊಬ್ಯುಟೈಲ್ ಬೆಂಜೀನ್ ಉತ್ಪಾದನೆಗಾಗಿ ಅಭಿವೃದ್ಧಿಪಡಿಸಿರುವ ‘ಕಾರ್ವೆ ಐಬಿಬಿ’ ತಂತ್ರಜ್ಞಾನ ಈ ಗೌರವಕ್ಕೆ ಪಾತ್ರವಾಗಿದೆ. ಔಷಧ ಉದ್ಯಮಕ್ಕೆ ಅಗತ್ಯವಿರುವ ಉನ್ನತ ಮೌಲ್ಯದ ಮಧ್ಯಂತರ ರಾಸಾಯನಿಕಗಳ ಉತ್ಪಾದನೆಯಲ್ಲಿ ಈ ತಂತ್ರಜ್ಞಾನ ಮಹತ್ವದ ಹೆಜ್ಜೆಯಾಗಿದೆ.
ಸಂಸ್ಕರಣಾಗಾರಕ್ಕೆ ಡಿಜಿಟಲ್ ಪರಿಹಾರ
‘ಸಂಸ್ಕರಣಾಗಾರ ಕ್ಷೇತ್ರದ ಅತ್ಯುತ್ತಮ ನಾವೀನ್ಯತೆ’ ವಿಭಾಗದಲ್ಲಿ ‘ರಿವೀಲ್ ಎಫ್ಸಿಸಿ’ ತಂತ್ರಜ್ಞಾನ ಪ್ರಶಸ್ತಿ ಪಡೆದಿದೆ. ಸಂಸ್ಕರಣಾಗಾರದ ಕಾರ್ಯನಿರ್ವಹಣೆಯನ್ನು ನೈಜ ಸಮಯದಲ್ಲಿ ವಿಶ್ಲೇಷಿಸಿ, ಪ್ರಕ್ರಿಯೆಗಳನ್ನು ಉತ್ತಮಗೊಳಿಸಲು ನೆರವಾಗುವ ಸ್ವದೇಶಿ ಡಿಜಿಟಲ್ ತಂತ್ರಜ್ಞಾನ ಇದಾಗಿದೆ. ಸಂಸ್ಕರಣಾ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಲಿದೆ.
ಪ್ರತಿಷ್ಠಿತ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಜಿ.ಡಿ. ಯಾದವ್ ನೇತೃತ್ವದ ತಜ್ಞರ ಸಮಿತಿಯು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ.
ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ನೇತೃತ್ವದ ನಿಯೋಗ ಪ್ರಶಸ್ತಿಗಳನ್ನು ಸ್ವೀಕರಿಸಿತು. ನಿಯೋಗದಲ್ಲಿ ನಿರ್ದೇಶಕ (ಸಂಸ್ಕರಣಾಗಾರ) ನಂದಕುಮಾರ್ ವೇಲಾಯುಧನ್ ಪಿಳ್ಳೈ, ಕಾರ್ಯನಿರ್ವಾಹಕ ನಿರ್ದೇಶಕ ಎನ್. ಆನಂದ ಕುಮಾರ್, ಜಿಜಿಎಂ (ನಿರ್ವಹಣೆ) ಎಚ್.ಸಿ. ಸತ್ಯನಾರಾಯಣ, ಜಿಜಿಎಂ (ತಾಂತ್ರಿಕ ಸೇವೆ) ಸುಧೀರ್ ಪೈ.ಎಂ., ಇನ್ನೋವೇಶನ್ ಸೆಂಟರ್ನ ಮುಖ್ಯ ವ್ಯವಸ್ಥಾಪಕ ಕಾರ್ತಿಕ್ ಆರ್. ಹಾಗೂ ಮುಖ್ಯ ವ್ಯವಸ್ಥಾಪಕ ಎಸ್. ನಿರ್ಮಲ್ ಗಣೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ:
ಸತತ ಐದನೇ ವರ್ಷದ ರಾಷ್ಟ್ರೀಯ ಮನ್ನಣೆ
ಎಂಆರ್ಪಿಎಲ್ಗೆ ಈ ಪ್ರಶಸ್ತಿಗಳು ಮತ್ತೊಂದು ಮಹತ್ವದ ಮೈಲಿಗಲ್ಲಾಗಿವೆ. ಭಾರತ ಸರಕಾರದ ಪ್ರಮುಖ ವೇದಿಕೆಗಳಾದ ಎನರ್ಜಿ ಟೆಕ್ನಾಲಜಿ ಮೀಟ್ ಹಾಗೂ ಇಂಡಿಯಾ ಎನರ್ಜಿ ವೀಕ್ಗಳಲ್ಲಿ ನಾವೀನ್ಯತೆಗಾಗಿ ಸತತ ಐದನೇ ವರ್ಷ ರಾಷ್ಟ್ರೀಯ ಮಟ್ಟದ ಮನ್ನಣೆ ಗಳಿಸಿರುವುದು ಸಂಸ್ಥೆಯ ಸಾಧನೆಯಾಗಿದೆ.



