October 28, 2026
Wednesday, October 28, 2026
spot_img

ಲಾಸ್ ಏಂಜಲೀಸ್‌ನಲ್ಲಿ ಮಹಾಕಾವ್ಯದ ಕಂಪು: ವರ್ಲ್ಡ್ ಪ್ರೀಮಿಯರ್‌ನಲ್ಲಿ ಮಿಂಚಿದ ‘ರಾಮಾಯಣ’ ಬಳಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗವೇ ಅತ್ಯಂತ ಕಾತುರದಿಂದ ಕಾಯುತ್ತಿರುವ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ವಿಶ್ವದ ಮೊದಲ ಪ್ರದರ್ಶನ ಲಾಸ್ ಏಂಜಲೀಸ್‌ನ ಪ್ರಸಿದ್ಧ ‘ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್’ನ ಡೇವಿಡ್ ಗಿಫೆನ್ ಥಿಯೇಟರ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿತು.

ಈ ಅದ್ಧೂರಿ ಪ್ರೀಮಿಯರ್ ಪ್ರದರ್ಶನದಲ್ಲಿ ಶ್ರೀರಾಮನ ಪಾತ್ರಧಾರಿ ರಣಬೀರ್ ಕಪೂರ್ ಅಭಿಮಾನಿಗಳಿಗೆ ಆತ್ಮೀಯವಾಗಿ ಹಸ್ತಲಾಘವ ಮಾಡಿ, ಶುಭಾಶಯ ಸ್ವೀಕರಿಸಿದರು. ಸೀತೆಯ ಪಾತ್ರದಲ್ಲಿ ನಟಿಸಿರುವ ನಟಿ ಸಾಯಿ ಪಲ್ಲವಿ ಸಾಂಪ್ರದಾಯಿಕ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿ, ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಾ ಸೆಲ್ಫಿಗೆ ಜೊತೆಯಾದರು. ಇನ್ನು ರಾವಣನ ಭವ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ತಮ್ಮ ಧರ್ಮಪತ್ನಿ ರಾಧಿಕಾ ಪಂಡಿತ್ ಅವರ ಕೈ ಹಿಡಿದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಈ ವಿಶೇಷ ಪ್ರೀಮಿಯರ್ ಶೋ ಸಂಪೂರ್ಣವಾಗಿ ಆಹ್ವಾನಿತರಿಗೆ ಮಾತ್ರ ಮೀಸಲಾಗಿತ್ತು. ಚಿತ್ರತಂಡದ ಜೊತೆಗೆ ಹಾಲಿವುಡ್‌ನ ಪ್ರಸಿದ್ಧ ನಟಿ ಜೇಡಾ ಪಂಕೆಟ್ ಸ್ಮಿತ್, ಬೆಂಜಿ ಕೆಲ್ಲಿ, ಜಿಸೆಲ್ಲಾ ಮರೇಂಗೊ ಸೇರಿದಂತೆ ಅಂತಾರಾಷ್ಟ್ರೀಯ ಚಿತ್ರರಂಗದ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಭಾರತೀಯ ಹಾಗೂ ಹಾಲಿವುಡ್ ಕಲಾವಿದರ ಸಮ್ಮಿಲನಕ್ಕೆ ಈ ಮ್ಯೂಸಿಯಂ ಸಾಕ್ಷಿಯಾಯಿತು.

ಭಾರತೀಯ ಪುರಾಣ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ‘ರಾಮಾಯಣ’ ಚಿತ್ರದ ಈ ಮೊದಲ ಪ್ರದರ್ಶನವು ಸಿನಿಮಾ ಪ್ರಿಯರಲ್ಲಿ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

Must Read