ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ತಮ್ಮ ಸಿನಿಮಾ ಕುಟುಂಬದ ಹಿನ್ನೆಲೆ ಮತ್ತು ‘ನೆಪೋಟಿಸಮ್’ ಚರ್ಚೆಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಖ್ಯಾತ ನಟಿ ಶರ್ಮಿಳಾ ಟಾಗೋರ್ ಅವರ ಮೊಮ್ಮಗಳಾಗಿ, ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗಳಾಗಿ ಚಿತ್ರರಂಗಕ್ಕೆ ಕಾಲಿಟ್ಟಿರುವ ಸಾರಾ, ತಮ್ಮ ಯಶಸ್ಸಿನ ಹಿಂದೆ ಕೇವಲ ಅದೃಷ್ಟವಷ್ಟೇ ಅಲ್ಲ, ಸ್ವಂತ ಪರಿಶ್ರಮವೂ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಕುಟುಂಬದ ಪರಂಪರೆ ಬಗ್ಗೆ ಮಾತನಾಡಿರುವ ಸಾರಾ, “ನಾನು ಮುಗ್ಧಳಲ್ಲ, ಸ್ಟಾರ್ ಕುಟುಂಬದಲ್ಲಿ ಹುಟ್ಟಿದ್ದರಿಂದ ನನಗೆ ಸುಲಭವಾಗಿ ಬಾಗಿಲು ತೆರೆದುಕೊಂಡಿತು, ಬೇಗನೇ ಗುರುತು ಸಿಕ್ಕಿತು ಎಂಬುದನ್ನು ಕೃತಜ್ಞತೆಯಿಂದ ಒಪ್ಪಿಕೊಳ್ಳುತ್ತೇನೆ” ಎಂದಿದ್ದಾರೆ. ಆರಂಭಿಕವಾಗಿ ಜನಪ್ರಿಯತೆ ಸಿಗಲು ಈ ಹಿನ್ನೆಲೆ ಸಹಾಯ ಮಾಡಿದೆ ಎಂಬುದನ್ನು ಅವರು ಮುಚ್ಚಿಮರೆ ಇಲ್ಲದೆ ತಿಳಿಸಿದ್ದಾರೆ.
ಆದರೆ, ಕೇವಲ ನೆಪೋಟಿಸಮ್ ಎಂಬ ಕಾರಣಕ್ಕೆ ತಾವೂ ಸೇರಿದಂತೆ ಜಾನ್ವಿ ಕಪೂರ್ ಹಾಗೂ ಅನನ್ಯಾ ಪಾಂಡೆ ಅವರಂತಹ ನಟಿಯರ ಕಷ್ಟವನ್ನು ಕಡೆಗಣಿಸುವುದು ಎಷ್ಟು ಸರಿ ಎಂದು ಸಾರಾ ಪ್ರಶ್ನಿಸಿದ್ದಾರೆ. “ನಾವು ಯಾರಿಗೆ ಹುಟ್ಟಬೇಕು ಎಂದು ಆರಿಸಿಕೊಂಡಿಲ್ಲ, ಅದರಲ್ಲಿ ನಮ್ಮ ತಪ್ಪಿಲ್ಲ. ನಮಗೆ ಸಿಕ್ಕ ಮೊದಲ ಅವಕಾಶ ದೊಡ್ಡದಾಗಿರಬಹುದು, ಆದರೆ ಎಂಟು ವರ್ಷಗಳ ವೃತ್ತಿಜೀವನದ ನಂತರವೂ ಇದನ್ನು ಪದೇ ಪದೇ ಸ್ಪಷ್ಟಪಡಿಸುವುದು ಬೇಸರ ತರಿಸುತ್ತದೆ” ಎಂದು ಅಳಲು ತೋಡಿಕೊಂಡಿದ್ದಾರೆ.
ತಮ್ಮ ವೈಯಕ್ತಿಕ ಬದುಕಿನ ಕಷ್ಟಗಳನ್ನು ಹಂಚಿಕೊಂಡಿರುವ ಸಾರಾ, ತಾನು ಒಂಟಿ ತಾಯಿಯ ಆಶ್ರಯದಲ್ಲಿ ಬೆಳೆದಿದ್ದೇನೆ ಎಂದಿದ್ದಾರೆ. “ನನಗಾಗಿ ಯಾರೂ ಚಿತ್ರರಂಗದ ಕಚೇರಿಗಳಿಗೆ ಹೋಗಿ ಒಪ್ಪಂದಗಳನ್ನು ಮಾಡಿಕೊಂಡಿಲ್ಲ, ಯಾರ ಬಳಿಯೂ ಹೋಗಿ ಸಿನಿಮಾ ಕೊಡಿ ಎಂದು ಬೇಡಿಕೊಂಡಿಲ್ಲ. ‘ಕೇದಾರನಾಥ್’ ಚಿತ್ರದ ಸಮಯದಲ್ಲಿ ಸಮಸ್ಯೆ ಎದುರಾದಾಗ ನಾನೇ ಸ್ವತಃ ಎಲ್ಲವನ್ನೂ ಬಗೆಹರಿಸಿಕೊಂಡಿದ್ದೇನೆ. ನನಗೆ ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಇರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ, ಸ್ಟಾರ್ ಗಿರಿಯ ಗ್ಲಾಮರ್ ಜಗತ್ತಿನ ಹಿಂದೆ ದೊಡ್ಡ ಜವಾಬ್ದಾರಿಗಳಿರುತ್ತವೆ ಹಾಗೂ ಪ್ರತಿಯೊಬ್ಬ ನಟ-ನಟಿಯೂ ತಮ್ಮದೇ ಆದ ಕಷ್ಟಗಳನ್ನು ದಾಟಿ ಇಲ್ಲಿಯವರೆಗೆ ಬಂದಿರುತ್ತಾರೆ ಎಂಬುದನ್ನು ಸಾರಾ ಅವರ ಈ ಮಾತುಗಳು ಸ್ಪಷ್ಟಪಡಿಸುತ್ತವೆ.



