October 28, 2026
Wednesday, October 28, 2026
spot_img

ಹಾಲಿವುಡ್ ಅಂಗಳದಲ್ಲೂ ‘ರಾವಣ’ನ ಕ್ರೇಜ್: ಕನ್ನಡದಲ್ಲೇ ಮಾತು ಶುರು ಮಾಡಿ ಪ್ರೇಕ್ಷಕರ ಮನಗೆದ್ದ ಯಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಸದ್ಯ ತೀವ್ರ ಕುತೂಹಲ ಮೂಡಿಸಿರುವ, ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ ಸಿನಿಮಾದ ವಿಶೇಷ ಪ್ರೀಮಿಯರ್ ಪ್ರದರ್ಶನ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ವಿದೇಶದಲ್ಲೂ ಭಾರತೀಯ ಸಂಸ್ಕೃತಿ ಮತ್ತು ಸಿನಿಮಾದ ಸೌಂದರ್ಯವನ್ನು ಪಸರಿಸಿದ ಈ ಕಾರ್ಯಕ್ರಮದಲ್ಲಿ ಚಿತ್ರಮಂದಿರ ಸಂಪೂರ್ಣವಾಗಿ ಭರ್ತಿಯಾಗಿತ್ತು.

ಈ ವಿಶೇಷ ಪ್ರೀಮಿಯರ್‌ನಲ್ಲಿ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ, ರಾಮನಾಗಿ ನಟಿಸಿರುವ ರಣಬೀರ್ ಕಪೂರ್ ಮತ್ತು ಸೀತೆಯ ಪಾತ್ರಧಾರಿ ಸಾಯಿ ಪಲ್ಲವಿ ಭಾಗವಹಿಸಿದ್ದರು. ಆದರೆ, ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ನಮ್ಮ ಕನ್ನಡದ ನಟ ಯಶ್. ರಾವಣನ ಪಾತ್ರದಲ್ಲಿ ಕಂಗೊಳಿಸಿದ ಯಶ್ ವೇದಿಕೆಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು “ಯಶ್… ಯಶ್…” ಮತ್ತು “ರಾವಣ…” ಎಂದು ಜಯಘೋಷ ಕೂಗಿ ಸಂಭ್ರಮಿಸಿದರು.

ಅಂತಾರಾಷ್ಟ್ರೀಯ ಮಟ್ಟದ ಈ ದೊಡ್ಡ ವೇದಿಕೆಯಲ್ಲಿ ನಟ ಯಶ್ ತಮ್ಮ ಮಾತುಗಳನ್ನು ‘ಎಲ್ಲರಿಗೂ ನಮಸ್ಕಾರ’ ಎಂದು ಅಚ್ಚ ಕನ್ನಡದಲ್ಲೇ ಆರಂಭಿಸಿ ಎಲ್ಲರ ಗಮನ ಸೆಳೆದರು. ಆ ಬಳಿಕ ಇಂಗ್ಲಿಷ್‌ನಲ್ಲಿ ಮುಂದುವರಿದು, “ನಾವು ಬಂದ ನೆಲವನ್ನು ಎಂದಿಗೂ ಮರೆಯಬಾರದು. ಕನ್ನಡ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗದ ಭಾಗವಾಗಿರುವುದಕ್ಕೆ ನನಗೆ ಅತ್ಯಂತ ಹೆಮ್ಮೆ ಇದೆ,” ಎಂದು ನುಡಿದರು. ಯಶ್ ಅವರ ಈ ಮಾತಿಗೆ ವಿದೇಶಿ ನೆಲದಲ್ಲೂ ಭಾರೀ ಚಪ್ಪಾಳೆ ತಟ್ಟುವ ಮೂಲಕ ಸಭಿಕರು ಗೌರವ ಸಲ್ಲಿಸಿದರು.

ಇನ್ನು ಸಿನಿಮಾ ನವೆಂಬರ್ 5ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಆದರೆ, ಚಿತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಡಬ್ಬಿಂಗ್ ಮಾಡಲಾಗಿದೆ ಎಂಬ ತಪ್ಪು ತಿಳಿವಳಿಕೆಯಿಂದ ಕೆಲ ಇಂಗ್ಲಿಷ್ ವಿಮರ್ಶಕರು ಪ್ರದರ್ಶನಕ್ಕೆ ಬಂದಿಲ್ಲ ಎಂಬ ವದಂತಿ ಹಬ್ಬಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಚಿತ್ರತಂಡ, ಇವೆಲ್ಲವೂ ಸತ್ಯಕ್ಕೆ ದೂರವಾದ ವದಂತಿಗಳು ಎಂದು ಸ್ಪಷ್ಟಪಡಿಸಿದೆ.

Must Read