ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಡೆಯುತ್ತಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಪಟ್ಟಿಯಲ್ಲಿದ್ದ ಬರೋಬ್ಬರಿ 716 ವಿದೇಶಿ ಪ್ರಜೆಗಳ ಹೆಸರನ್ನು ಭಾರತೀಯ ಚುನಾವಣಾ ಆಯೋಗ ಕೈಬಿಟ್ಟಿದೆ.
ಬೆಂಗಳೂರಿನಲ್ಲಿಯೇ ಒಟ್ಟಾರೆ 583 ವಿದೇಶಿ ಪ್ರಜೆಗಳಿದ್ದು, ಇದರಲ್ಲಿ ನೇಪಾಳದ 545 ಪ್ರಜೆಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇಪಾಳದ 17, ಬ್ರಿಟನ್ನ 2, ಕೆನಡಾದ 5, ಆಸ್ಟ್ರೇಲಿಯಾದ 6, ಅಮೆರಿಕದ 6 ಹಾಗೂ ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ನಾರ್ವೆ ದೇಶಗಳ ತಲಾ ಒಬ್ಬರು ಸೇರಿದಂತೆ ಒಟ್ಟು 40 ವಿದೇಶಿ ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನೇಪಾಳ, ಪಾಕಿಸ್ತಾನ, ಅಮೆರಿಕ ಮತ್ತು ಬಾಂಗ್ಲಾದೇಶದ 22 ವಿದೇಶಿ ಪ್ರಜೆಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಉಡುಪಿಯಲ್ಲಿ ನೇಪಾಳ, ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳ 44 ವಿದೇಶಿ ಪ್ರಜೆಗಳ ಹೆಸರುಗಳನ್ನು ಅಳಿಸಲಾಗಿದೆ. ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿಯೂ ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದು ಪತ್ತೆಯಾಗಿದೆ. ಈ ಪ್ರಜೆಗಳ ಬಳಿ ಗುರುತಿನ ಚೀಟಿಗಳಿತ್ತು ಆದರೆ ಶಾಲಾ ಪ್ರಮಾಣಪತ್ರ, ಆಸ್ತಿ ಪತ್ರ ಹಾಗೂ ಪಟ್ಟಿಯಲ್ಲಿ ಸಮೂದಿಸಲಾದ ಇನ್ನಿತರ ಮಾಹಿತಿ ಇರಲಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.



