ಹೊಸದಿಗಂತ ವರದಿ ಚಿತ್ರದುರ್ಗ:
ವಿಧಾನ ಪರಿಷತ್ ಚುನಾವಣೆಯ ಈ ಭರ್ಜರಿ ಗೆಲುವು ಎನ್ಡಿಎ ಒಕ್ಕೂಟದ ಒಗ್ಗಟ್ಟು ಮತ್ತು ನಾಯಕರ ಸಾಮೂಹಿಕ ನೇತೃತ್ವಕ್ಕೆ ಸಿಕ್ಕಿದ ಮನ್ನಣೆಯಾಗಿದೆ. ಜೊತೆಗೆ ಪ್ರಸ್ತುತ ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳ ವಿರುದ್ಧ ಪದವೀಧರ ಹಾಗೂ ಶಿಕ್ಷಕ ಮತದಾರರು ನೀಡಿರುವ ಎಚ್ಚರಿಕೆಯ ಸಂದೇಶ ಹಾಗೂ ಪೇಪರ್ ಬ್ಯಾಲೆಟ್ನಲ್ಲೂ ಜನಪರ ಒಲವು ಇದೆ ಎಂಬುದಕ್ಕೆ ಈ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಎನ್.ಡಿ.ಎ. ಮೃತ್ರಿ ಕೊಟದ ಅಭ್ಯರ್ಥಿಗಳು ಜಯ ಗಳಿಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಬುಧವಾರ ಆಚರಿಸಿದ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟವು ಜಯ ಗಳಿಸಿದೆ. ಇದು ಕರ್ನಾಟಕ ಸರ್ಕಾರದ ದುರಾಡಳಿತ ಹಾಗೂ ಬಿಜೆಪಿ – ಜೆಡಿಎಸ್ ನಾಯಕರ ಒಗ್ಗಟ್ಟಿನ ಫಲವಾಗಿದೆ ಎಂದರು.
ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೊದಲನೇ ಸುತ್ತಿನ ಮತದಾನದಲ್ಲೇ ಜಯ ಗಳಿಸುವುದಾಗಿ ತಿಳಿಸಲಾಗಿತ್ತು. ಅದರಂತೆ ರಾಜ್ಯದ ಮತದಾರರು ಅತ್ಯಂತ ಹೆಚ್ಚಿನ ಮತಗಳನ್ನು ನೀಡಿ ಕೆ.ಎಂ.ಸುರೇಶ್ ಅವರನ್ನು ಜಯಶಾಲಿಯಾಗಿ ಮಾಡಿದ್ದಾರೆ. ಕಳೆದ 40-50 ವರ್ಷಗಳಿಂದ ಈ ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿ, ಜನಸಂಘ ಅಥವಾ ಎನ್ಡಿಎ ಜಯ ಗಳಿಸಿವೆ. ಜೆಡಿಎಸ್ ಎರಡು ಬಾರಿ ಗೆದ್ದಿರುವುದು ಸೇರಿದಂತೆ ಒಟ್ಟು9 ಬಾರಿ ಈ ಕ್ಷೇತ್ರವನ್ನು ಗೆದ್ದುಕೊಂಡ ಐತಿಹಾಸಿಕ ಹಿನ್ನೆಲೆ ಇದೆ ಎಂದು ತಿಳಿಸಿದರು.
ಈ ಚುನಾವಣಾ ಗೆಲುವಿಗೆ ನರೇಂದ್ರ ಮೋದಿ, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಹಾಗೂ ಚಲವಾದಿ ನಾರಾಯಣಸ್ವಾಮಿ ಮುಂತಾದವರ ನೇತೃತ್ವ ಹಾಗೂ ಮಾರ್ಗದರ್ಶನ ಕಾರಣವಾಗಿದೆ. ರಾಜ್ಯದ ಬುದ್ಧಿವಂತ ಮತದಾರರು ಅಂದರೆ, ಪದವೀಧರರು ಹಾಗೂ ಶಿಕ್ಷಕರು, ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸಿ ಈ ಜಯ ತಂದುಕೊಟ್ಟಿರುವುದು ರಾಜ್ಯ ಸರ್ಕಾರದ ವೈಫಲ್ಯಗಳಿಗೆ ಸ್ಪಷ್ಟ ಸಂದೇಶವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಇವಿಎಂ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ವಿರೋಧ ಪಕ್ಷದವರು ಇವಿಎಂ ಮೂಲಕ ಬಿಜೆಪಿ ಗೆಲ್ಲುತ್ತಿದೆ ಎಂದು ಆರೋಪಿಸುತ್ತಿರುವುದನ್ನು ನೋಡಿದ್ದೇವೆ. ಆದರೆ ಈ ಚುನಾವಣೆ ಪೇಪರ್ ಬ್ಯಾಲೆಟ್ ಮೂಲಕ ನಡೆದಿದ್ದು, ನಾಲ್ಕು ಕ್ಷೇತ್ರಗಳಲ್ಲೂ ಮೊದಲನೇ ಸುತ್ತಿನಲ್ಲೇ ಅಭೂತಪೂರ್ವ ಗೆಲುವು ಸಾಧಿಸಿರುವುದು ವಿಶೇಷ. ಇವಿಎಂ ಬಗ್ಗೆ ಮಾತನಾಡುತ್ತಿದ್ದವರಿಗೆ ಇದು ಸೂಕ್ತ ನಿದರ್ಶನವಾಗಿದ್ದು, ಪೇಪರ್ ಬ್ಯಾಲೆಟ್ನಲ್ಲೂ ಜನತಾ ಪಕ್ಷ ಹಾಗೂ ಎನ್ಡಿಎಗೆ ಜನತೆಯ ಬೆಂಬಲವಿದೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಜಿ.ಹೆಚ್. ಮೊಹನ್, ರೈತ ಮೋರ್ಚಾ ಕಾರ್ಯದರ್ಶಿ ಕೆ.ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯದರ್ಶಿ ರೇಖಾ, ವಕ್ತಾರ ನವೀನ್ ಚಾಲುಕ್ಯ, ಗ್ರಾಮಾಂತರ ಅದ್ಯಕ್ಷ ನಾಗರಾಜ್, ನಗರಸಬಾ ಮಾಜಿ ಸದಸ್ಯ ಲಿಂಗರಾಜ್, ಸುರೇಶ್, ದಗ್ಗೆ ಶಿವಪ್ರಕಾಶ್, ಕಿರಣ, ವಸಂತಾಚಾರ್, ನವೀನ್, ನಾಗರಾಜ್, ವೆಂಕಟೇಶ್, ಬಸಮ್ಮ, ಶಮಿಕಾ, ಕಾಂಚನಾ, ರೋಹಿತ್, ಚಂದ್ರ್ರಿಕಾ ಲೋಕನಾಥ್, ಅರುಣಕುಮಾರಿ, ಶಾಂತಮ್ಮ, ಮಂಜುಳಮ್ಮ, ಕವನಾ, ಕವಿತಾ, ರಜನಿ, ದೇವಿಕಾ ಮತ್ತಿತರರು ಭಾಗವಹಿಸಿದ್ದರು.



