ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಟಾ ಸಂಸ್ಥೆಗೆ ಸಂಬಂಧಿಸಿದ ಆಂತರಿಕ ಮತ್ತು ಕಾನೂನು ವಿಷಯಗಳನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಾಣಿಜ್ಯ ಮತ್ತು ಕಾನೂನು ವಿಷಯಗಳ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುವ ಬದಲು ರಚನಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಅವರು ರಾಹುಲ್ ಗಾಂಧಿಗೆ ಕಿವಿಮಾತು ಹೇಳಿದ್ದಾರೆ.
ರಾಹುಲ್ ಗಾಂಧಿ ಮಾಡಿದ ಆರೋಪಗಳು
ಟಾಟಾ ಸನ್ಸ್ನ ಕಾರ್ಯಕಾರಿ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ಮರುನೇಮಕಕ್ಕೆ ಸಂಬಂಧಿಸಿದ ವಿವಾದದ ನಡುವೆಯೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ಭಾರತೀಯ ಉದ್ಯಮಗಳನ್ನು ಬಿಜೆಪಿ ನೇತೃತ್ವದ ಸರ್ಕಾರವು ತನ್ನ “ಆಟದ ವಸ್ತು”ವನ್ನಾಗಿ ಮಾಡಿಕೊಂಡಿದೆ ಮತ್ತು ಉದ್ಯಮಿಗಳು ಮಾತನಾಡಲು ಹೆದರುತ್ತಿದ್ದಾರೆ ಎಂದು ಆರೋಪಿಸಿದ್ದರು. “ಟಾಟಾ ಸಂಸ್ಥೆಯನ್ನು ಧ್ವಂಸಗೊಳಿಸಲಾಗುತ್ತಿದೆ, ಆದರೂ ಯಾವುದೇ ಉದ್ಯಮಿ ಒಂದು ಮಾತನ್ನೂ ಆಡಲು ಧೈರ್ಯ ಮಾಡುತ್ತಿಲ್ಲ. ನೀವು ಎಲ್ಲಿಯವರೆಗೆ ಮೌನವಾಗಿರುತ್ತೀರಿ? ಅವರು ನಿಮ್ಮನ್ನು ತಮ್ಮದಾಗಿಸಿಕೊಳ್ಳುವವರೆಗಾ? ಭಾರತೀಯ ಉದ್ಯಮವು ಮೋದಿ ಮತ್ತು ಶಾ ಅವರ ಆಟದ ವಸ್ತುವಲ್ಲ. ನಿಮ್ಮಲ್ಲಿ ಧೈರ್ಯವಿಲ್ಲ, ಆದರೆ ನಮ್ಮಲ್ಲಿದೆ. ಈ ಅಪರಾಧಗಳಿಗೆ ನಾವು ನ್ಯಾಯವನ್ನು ಖಾತರಿಪಡಿಸುತ್ತೇವೆ” ಎಂದು ರಾಹುಲ್ ಬರೆದಿದ್ದರು.
ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು
ರಾಹುಲ್ ಗಾಂಧಿ ಅವರ ಈ ಆರೋಪಗಳಿಗೆ ಎಕ್ಸ್ ನಲ್ಲೇ ಸುದೀರ್ಘ ಪೋಸ್ಟ್ ಮೂಲಕ ಉತ್ತರಿಸಿರುವ ನಿರ್ಮಲಾ ಸೀತಾರಾಮನ್ ಅವರು, “ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರೇ, ಪ್ರತಿಯೊಂದು ವಿಷಯವನ್ನೂ ರಾಜಕೀಯಗೊಳಿಸುವುದರಿಂದ ದೂರವಿರಿ ಎಂದು ನಾನು ಸಲಹೆ ನೀಡುತ್ತೇನೆ. ವಾಣಿಜ್ಯ ಮತ್ತು ಕಾನೂನು ವಿಷಯಗಳನ್ನು ಆಕಸ್ಮಿಕವಾಗಿ ಅಪರಾಧ ಎಂದು ಕರೆಯುವುದು ಒಪ್ಪಲು ಸಾಧ್ಯವಿಲ್ಲ. ನೀವು ಭಾರತೀಯ ಉದ್ಯಮ ಮತ್ತು ನಮ್ಮ ಉದ್ಯಮಿಗಳ ಯಶಸ್ಸನ್ನು ಪದೇ ಪದೇ ಹೀಯಾಳಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ದಶಕಗಳ ಕಾಲ ನಿಮ್ಮ ಪಕ್ಷವು ಉಸಿರುಗಟ್ಟಿಸುವ ‘ಲೈಸೆನ್ಸ್-ಕೋಟಾ ರಾಜ್’ ಅಡಿಯಲ್ಲಿ ಭಾರತೀಯ ಉದ್ಯಮಿಗಳ ಉತ್ಸಾಹವನ್ನು ಹೊಸಕಿ ಹಾಕಿತ್ತು ಮತ್ತು ಕೋಟ್ಯಂತರ ಭಾರತೀಯರನ್ನು ಬಡತನಕ್ಕೆ ದೂಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರವು ಭಾರತೀಯ ಉದ್ಯಮವನ್ನು ಉದ್ಯೋಗ ಸೃಷ್ಟಿಕರ್ತರು ಮತ್ತು ಆರ್ಥಿಕತೆಯ ಚಾಲಕರು ಎಂದು ಗೌರವಿಸುತ್ತದೆ. ನಮ್ಮ ನೀತಿಗಳನ್ನು ಉದ್ಯಮಗಳಿಗೆ ಬೆಂಬಲ ನೀಡಲು ಮತ್ತು ಹೂಡಿಕೆಯನ್ನು ಉತ್ತೇಜಿಸಲು ರೂಪಿಸಲಾಗಿದೆ.
ರಾಜಕೀಯ ಪಕ್ಷಗಳು, ನಾಯಕರು, ಸರ್ಕಾರಗಳು ಮತ್ತು ಸಂಸ್ಥೆಗಳು ನಮ್ಮ ಉದ್ಯಮವನ್ನು ಬೆಂಬಲಿಸಲು, ರೈತರನ್ನು ಬಲಪಡಿಸಲು ಮತ್ತು ನಮ್ಮ ಯುವಕರ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸಮಾನ ಜವಾಬ್ದಾರಿಯನ್ನು ಹೊಂದಿವೆ. ಆದ್ದರಿಂದ ನಿಮ್ಮ ರಾಜಕೀಯ ಉದ್ದೇಶಗಳಿಗಾಗಿ ಆಧಾರರಹಿತ ಆರೋಪಗಳನ್ನು ಮಾಡುವ ಬದಲು ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದಿದ್ದಾರೆ.
ಇದನ್ನೂ ಓದಿ:
ವಿವಾದದ ಹಿನ್ನೆಲೆ
ಟಾಟಾ ಸನ್ಸ್ ಮಂಡಳಿಯು ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡಲು ಅನುಮೋದಿಸಿದ ಸಭೆಯಲ್ಲಿ ಕಾರ್ಯವಿಧಾನದ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಆ ನಿರ್ಣಯದ ಸಿಂಧುತ್ವವನ್ನು ಪ್ರಶ್ನಿಸಿ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಅವರು ಆಕ್ಷೇಪ ವ್ಯತ್ತಪಡಿಸಿದ ನಂತರ ಟಾಟಾ ಗ್ರೂಪ್ನಲ್ಲಿ ಈ ಆಂತರಿಕ ವಿವಾದ ಉಂಟಾಗಿದೆ. ಈ ವಾಣಿಜ್ಯ ಮತ್ತು ಕಾನೂನು ಜಟಾಪಟಿಯನ್ನೇ ಬಳಸಿಕೊಂಡು ರಾಹುಲ್ ಗಾಂಧಿ ಅವರು ಸರ್ಕಾರದ ವಿರುದ್ಧ ರಾಜಕೀಯ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.



