October 28, 2026
Wednesday, October 28, 2026
spot_img

ಶಾಲೆಗೆ ತೆರಳುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಯ ಅಪಹರಣ; ಬಾಗಲಕೋಟೆ ಮೂಲದ ಆರೋಪಿ ಬಂಧನ

ಹೊಸದಿಗಂತ ವರದಿ ಉಳ್ಳಾಲ:

ಶಾಲೆಗೆ ತೆರಳುತ್ತಿದ್ದ ಒಂಭತ್ತನೇ ತರಗತಿಯ ಪರಿಶಿಷ್ಟ ಜಾತಿಯ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯೋರ್ವಳನ್ನ ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ ಬಾಗಲಕೋಟೆ ಮೂಲದ ಆರೋಪಿಯನ್ನ ಉಳ್ಳಾಲ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಹಾಗೂ ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಮೂಲದ ಉಳ್ಳಾಲ ಭಾಗದಲ್ಲಿ ಗಾರೆ ಕೆಲಸ ನಿರ್ವಹಿಸುತ್ತಿರುವ ಗೂಡಾಸಾಬ್ ಯಾನೆ ಆಶಿಫ್ (23)ಬಂಧಿತ ಆರೋಪಿ.

ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿರುವ ಬಾಗಲಕೋಟೆ ಮೂಲದ ಕುಟುಂಬವೊಂದರ ಇಬ್ಬರು ಅಪ್ರಾಪ್ತ ಸಹೋದರಿಯರು ತಾಲೂಕಿನ ಕೇಂದ್ರ ಭಾಗದ ಕನ್ನಡ ಮಾಧ್ಯಮ‌ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರೆನ್ನಲಾಗಿದೆ. ಮಂಗಳವಾರ ಬೆಳಿಗ್ಗೆ ಪೋಷಕರು ಎಂದಿನಂತೆ ಇಬ್ಬರು ಹೆಣ್ಮಕ್ಕಳನ್ನ ಶಾಲಾ ವಾಹನದಲ್ಲಿ ಶಾಲೆಗೆ ಕಳುಹಿಸಿದ್ದರು. ಆದರೆ ಇಬ್ಬರು ಸಹೋದರಿಯರಲ್ಲಿ ಹಿರಿಯವಳು ಶಾಲೆಗೆ ಬಂದಿಲ್ಲವೆಂದು ಶಾಲಾ ಟೀಚರ್ ಪೋಷಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.

ನಾಪತ್ತೆಯಾದ ಅಪ್ರಾಪ್ತೆಯು ತನ್ನನ್ನ ಗೂಡಾಸಾಬ್ ಯಾನೆ ಆಶಿಫ್ ಎಂಬಾತನು ಶಾಲೆಯ ಬಳಿ ಹಿಂಬಾಲಿಸಿಕೊಂಡು ಬಂದು ಮಾತನಾಡಿಸುತ್ತಿದ್ದ ವಿಚಾರವನ್ನು ತಾಯಿಯಲ್ಲಿ ಈ ಹಿಂದೆಯೇ ತಿಳಿಸಿದ್ದಳಂತೆ. ಅಪ್ರಾಪ್ತ ಬಾಲಕಿಯ ತಾಯಿಯು ತನ್ನ ಊರಿನವನು ಪರಿಚಯಸ್ಥನಾಗಿದ್ದ ಗೂಡಾಸಾಬ್ ನನ್ನ ಭೇಟಿಯಾಗಿ ನಾವು ಪರಿಶಿಷ್ಟ ಜಾತಿಯವರಾಗಿದ್ದು ತನ್ನ ಮಗಳು ಕೂಡಾ ಅಪ್ರಾಪ್ತೆಯಾಗಿದ್ದು ಆಕೆಯ ವಿಚಾರಕ್ಕೆ ಬರಬಾರದೆಂದು ಎಚ್ಚರಿಕೆ ನೀಡಿದ್ದರಂತೆ. ತನ್ನ ಮಗಳನ್ನ ಗೂಡಾಸಾಬನೆ ಪುಸಲಾಯಿಸಿ ಅಪಹರಣ ಮಾಡಿದ್ದು, ಆತನ ವಿರುದ್ಧ ಕ್ರಮ ಕೈಗೊಂಡು ಮಗಳನ್ನ ಪತ್ತೆ ಹಚ್ಚಿ ಕೊಡುವಂತೆ ಅಪ್ರಾಪ್ತ ಬಾಲಕಿಯ ತಾಯಿಯು ಉಳ್ಳಾಲ ಪೊಲೀಸ್ ಠಾಣೆಗೆ ಮಂಗಳವಾರ ಸಂಜೆ ದೂರು ನೀಡಿದ್ದರು.

ಬಾಲಕಿಯ ತಾಯಿಯ ದೂರಿನನ್ವಯ ಉಳ್ಳಾಲ ಪೊಲೀಸರು ಆರೋಪಿಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಕಲಂ 3(2)(V) ಅಡಿ ಬಿಎನ್ ಎಸ್ 137(2) ಪ್ರಕರಣ ದಾಖಲಿಸಿದ್ದರು.

ಗೂಡಾಸಾಬ್ ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ್ದು, ಪ್ರಕರಣದ ಬೆನ್ನು ಬಿದ್ದ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಂಗಳವಾರ ರಾತ್ರಿಯೇ ಸೋಮೇಶ್ವರದಲ್ಲಿ ಆರೋಪಿಯನ್ನ ವಶಕ್ಕೆ ಪಡೆದಿದ್ದು, ಅಪ್ರಾಪ್ತ ಬಾಲಕಿಯನ್ನೂ ರಕ್ಷಿಸಿದ್ದಾರೆ. ಬಾಲಕಿಯ ಹೇಳಿಕೆಯನ್ನ ಆಧರಿಸಿ ಆರೋಪಿಯ ವಿರುದ್ಧ ಪೋಕ್ಸೊ ಪ್ರಕರಣವನ್ನೂ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Must Read