ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ಮಾತ್ರ ದರುಶನ ನೀಡುವ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ತೆರೆಯಲಿದೆ. ಆಶ್ವೀಜ ಕೃಷ್ಣ ಪಕ್ಷದ ಚತುರ್ಥಿ ಹಾಗೂ ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಗರ್ಭಗುಡಿಯ ಬಾಗಿಲನ್ನು ತೆರೆಯಲಿದ್ದು, ಇಂದಿನಿಂದ 14 ದಿನಗಳು ದೇವಿ ದರುಶನಕ್ಕೆ ಅವಕಾಶವಿದೆ.
ನಾಡಹಬ್ಬದಂತೆಯೇ ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಭಕ್ತರು ಹಾಸನದತ್ತ ಮುಖ ಮಾಡಿದ್ದಾರೆ. ಈ ಬಾರಿ ಭಕ್ತಾದಿಗಳಲ್ಲಿ ನೂಕು ನುಗ್ಗಲು ಆಗದಂತೆ ಎರಡು ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿದೆ. ಒಂದು ಮಾಮೂಲಿ ಕ್ಯೂ, ಇನ್ನೊಂದು 300 ರೂಪಾಯಿಯ ಕ್ಯೂ ಹಾಗೂ ಮತ್ತೊಂದು 1,000 ರೂಪಾಯಿಯ ಕ್ಯೂ ಇರಲಿದೆ.
ಗೋಲ್ಡನ್ ಪಾಸ್ ಬಳಕೆ
ಇನ್ನು ಗೋಲ್ಡನ್ ಪಾಸ್ ಹೊಂದಿರುವ ಜನರು ಬೆಳಗ್ಗೆ ಎಂಟು ಗಂಟೆಯಿಂದ ಹತ್ತು ಗಂಟೆಯ ಒಳಗೆ ತಮ್ಮ ದರುಶನವನ್ನು ಮುಗಿಸಿಕೊಳ್ಳಬೇಕಿದೆ. ಒಂದು ಗೋಲ್ಡ್ ಕಾರ್ಡ್ನಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶ ದೊರೆಯಲಿದೆ.
ಇನ್ನು ವಿಐಪಿಗಳು ದರುಶನಕ್ಕೆ ಆಗಮಿಸುವುದಾದರೆ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ಒಳಗೆ ಆಗಮಿಸಬೇಕಾಗಿದೆ. ಜಿಲ್ಲಾಡಳಿತದ ವತಿಯಿಂದಲೇ ವಿಶೇಷ ದರುಶನ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಮೊದಲ ಹಾಗೂ ಕೊನೆಯ ದಿನ ಯಾವುದೇ ರೀತಿಯ ಶಿಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಬಿಗಿ ಭದ್ರತೆ
ಈ ಉತ್ಸವಕ್ಕೆ 30 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಸಿಸಿಟಿವಿ, ಡ್ರೋನ್ ಕ್ಯಾಮರಾ ಕಣ್ಗಾವಲು ಇದೆ. ಇನ್ನು ಲಡ್ಡು ಪ್ರಸಾದಕ್ಕೆ 56 ರೂ. ನಿಗದಿಯಾಗಿದ್ದು, ಒಂದು ದೊನ್ನೆ ಪ್ರಸಾದಕ್ಕೆ 17 ರೂಪಾಯಿ ನಿಗದಿಯಾಗಿದೆ.
ವಿಶೇಷ ಬಸ್ ಹಾಗೂ ರೈಲುಗಳ ಸಂಚಾರ
ಬೆಂಗಳೂರು-ಹಾಸನ ಹಾಗೂ ಅರಸೀಕೆರೆ-ಹಾಸನ ನಡುವೆ ಇಂದಿನಿಂದ ನವೆಂಬರ್ 11 ರವರೆಗೆ ಎರಡು ವಿಶೇಷ ರೈಲುಗಳ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ನೀಡಿದೆ. ಸಾರಿಗೆ ಇಲಾಖೆಯು ಮೈಸೂರು, ಬೆಂಗಳೂರು, ಮಡಿಕೇರಿ ಸೇರಿದಂತೆ ಪ್ರಮುಖ ಜಿಲ್ಲೆಗಳಿಂದ ಹಾಸನಕ್ಕೆ 200ಕ್ಕೂ ಅಧಿಕ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳನ್ನು ನಿಯೋಜಿಸಿದೆ.
ಸಾಂಸ್ಕೃತಿ ಕಾರ್ಯಕ್ರಮಗಳು
ಇನ್ನು ನಾಡಹಬ್ಬ ದಸರಾ ಮಾದರಿಯಲ್ಲಿಯೇ ಈ ಬಾರಿ ಹಾಸನಾಂಬೆ ಉತ್ಸವ ನೆರವೇರಿಸುತ್ತಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕುಸ್ತಿ, ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ ಇರಲಿದೆ. ಇನ್ನು ಬೆಕ್ಕು, ಶ್ವಾನ ಹಾಗೂ ಜೋಡೆತ್ತುಗಳ ಪ್ರದರ್ಶನ ಇರಲಿದೆ. ರಂಗೋಲಿ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಮಾಡಲಾಗುತ್ತಿದೆ.



