October 28, 2026
Wednesday, October 28, 2026
spot_img

ಆಂಧ್ರದಲ್ಲಿ ಅರ್ನಾಬ್ ಚಂಡಮಾರುತದ ಅಟ್ಟಹಾಸ: ಐವರು ಸಾ*ವು, ಹಲವು ಮರಗಳು ನೆಲಸಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಧ್ರಪ್ರದೇಶದಲ್ಲಿ ಭೀಕರ ‘ಅರ್ನಾಬ್’ ಚಂಡಮಾರುತ ತೀವ್ರ ಹಾನಿ ಉಂಟುಮಾಡಿದ್ದು, ವಿದ್ಯುತ್ ಆಘಾತ ಹಾಗೂ ಗೋಡೆ ಕುಸಿತದಂತಹ ಅವಘಡಗಳಲ್ಲಿ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬುಧವಾರ ಮುಂಜಾನೆ ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯ ನಡುವೆ ಈ ಚಂಡಮಾರುತವು ಗಂಭೀರ ಸ್ವರೂಪದಲ್ಲಿ ಭೂಮಿಗೆ ಅಪ್ಪಳಿಸಿದೆ. ಸುಮಾರು 6 ಗಂಟೆಗಳ ಕಾಲ ಅಬ್ಬರಿಸಿದ ಈ ಚಂಡಮಾರುತ, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿಯೊಂದಿಗೆ ವಿನಾಶದ ಹಾದಿ ಬಿಟ್ಟುಹೋಗಿದೆ.

ಮರಗಳು ಮತ್ತು ವಿದ್ಯುತ್ ಕಂಬಗಳು ಧರಾಶಾಹಿ

 ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲೇ ಸುಮಾರು 50,000 ಮರಗಳು ಉರುಳಿಬಿದ್ದಿವೆ. ಕೋನಸೀಮಾದಲ್ಲಿ 33,000 ತೆಂಗಿನ ಮರಗಳು ನಾಶವಾಗಿವೆ. ರಾಜ್ಯದಾದ್ಯಂತ 15,000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಸಮಗೊಂಡಿವೆ.  ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ತೋಟಗಾರಿಕಾ ಬೆಳೆಗಳಿಗೂ ಭಾರೀ ನಷ್ಟ ಸಂಭವಿಸಿದೆ.

ಏಲೂರು, ಪಶ್ಚಿಮ ಗೋದಾವರಿ ಮತ್ತು ವಿಜಯನಗರಂ ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳ ನೂರಾರು ಹಳ್ಳಿಗಳು ಚಂಡಮಾರುತದ ಹೊಡೆತಕ್ಕೆ ಸಿಲುಕಿವೆ. ಅನಕಾಪಲ್ಲಿಯ ಕಣ್ಣೂರಿಪಾಳ್ಯಂನಲ್ಲಿ ಅತ್ಯಧಿಕ 261.5 ಮಿಮೀ ಮಳೆಯಾಗಿದೆ.

ಮುಖ್ಯಮಂತ್ರಿಯಿಂದ ಪರಿಹಾರ ಘೋಷಣೆ

ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದ್ದು, ಸಂತ್ರಸ್ತರಿಗೆ ತುರ್ತು ನೆರವು ಘೋಷಿಸಿದ್ದಾರೆ. ಮನೆಗಳು ಮುಳುಗಡೆಯಾದ ಕುಟುಂಬಗಳಿಗೆ ತಲಾ 25 ಕೆಜಿ ಅಕ್ಕಿ ಹಾಗೂ ತೊಂದರೆಗೊಳಗಾದ ನೇಕಾರರು ಮತ್ತು ಮೀನುಗಾರರಿಗೆ 50 ಕೆಜಿ ಅಕ್ಕಿ ವಿತರಿಸಲಾಗುವುದು. ಇದರೊಂದಿಗೆ ಈರುಳ್ಳಿ, ಅಡುಗೆ ಎಣ್ಣೆ ಮತ್ತು ತೊಗರಿ ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ಚಂಡಮಾರುತದ ಆಶ್ರಯ ತಾಣಗಳಲ್ಲಿ ಆಶ್ರಯ ಪಡೆದವರಿಗೆ ತಲಾ 1,000 ರೂ.ಗಳಂತೆ  ಆರ್ಥಿಕ ಸಹಾಯ ನೀಡಲಾಗುವುದು ಎದು ತಿಳಿಸಿದ್ದಾರೆ.

ಇದನ್ನೂ ಓದಿ:

ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ಸಾರಿಗೆ ಸೌಕರ್ಯ ಕಲ್ಪಿಸಲು ಬಿದ್ದಿರುವ ಮರಗಳನ್ನು ತಕ್ಷಣವೇ ತೆರವುಗೊಳಿಸಲು 30,000ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಷ್ಟದ ಮೌಲ್ಯಮಾಪನ ಮಾಡಲು ಕೇಂದ್ರದ ವಿಶೇಷ ತಂಡವನ್ನು ಕಳುಹಿಸಿಕೊಡುವಂತೆ ಕೋರಿ ಸಿಎಂ ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.  

ರಾಜ್ಯದಲ್ಲಿ ಗುರುವಾರವೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆಯು 13 ಜಿಲ್ಲೆಗಳಿಗೆ ಹಠಾತ್ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ.

Must Read

Skip to toolbar