ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ತೆರೆಕಂಡ ‘ಪೆದ್ದಿ’ ಚಿತ್ರದಲ್ಲಿ ಅಚಿಯಮ್ಮ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದ ಬಾಲಿವುಡ್ ನಟಿ ಜಾನ್ವಿ ಕಪೂರ್, ಆ ಪಾತ್ರದ ಗ್ಲಾಮರೈಸೇಶನ್, ಅನುಚಿತ ಕ್ಯಾಮೆರಾ ಆಂಗಲ್ ಹಾಗೂ ಮಹಿಳಾ ಪಾತ್ರವನ್ನು ವಸ್ತುವಿನಂತೆ ಬಿಂಬಿಸಿದ ಪರಿಗೆ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ‘ಕಾಫಿ ವಿತ್ ಕರಣ್ ಸೀಸನ್ 9’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಾನ್ವಿ, ಈ ವಿವಾದದ ಬಗ್ಗೆ ಮಾತನಾಡಿದ್ದು, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಈ ಟೀಕೆಗಳು ಸಮಂಜಸವೇ ಎಂದು ಕೇಳಿದಾಗ ಉತ್ತರಿಸಿದ ಜಾನ್ವಿ, “ಸಿನಿಮಾಕ್ಕಾಗಿ ಹಲವರು ಶ್ರಮವಹಿಸಿ ಕೆಲಸ ಮಾಡಿರುತ್ತಾರೆ. ಹಾಗಾಗಿ ಇದರ ಬಗ್ಗೆ ಮಾತನಾಡಲು ನನಗೆ ಭೀತಿಯಿತ್ತು. ಆದರೆ ಈ ವಿವಾದದಲ್ಲಿ ನನ್ನ ಪಾಲು ಎಷ್ಟಿದೆಯೋ ಅದರ ಸಂಪೂರ್ಣ ಹೊಣೆಯನ್ನು ನಾನು ಹೊರಲೇಬೇಕು. ಇಂತಹ ನಿರೂಪಣೆಗಳು ಸಮಾಜದ ಮೇಲೆ, ವಿಶೇಷವಾಗಿ ಮಹಿಳೆಯರ ಮೇಲೆ ಬೀರುವ ನಕಾರಾತ್ಮಕ ಪರಿಣಾಮ ನನ್ನ ಮನಸ್ಸನ್ನು ಕೆಡಿಸಿದೆ. ಈ ಅಪರಾಧಪ್ರಜ್ಞೆ ನನ್ನೊಂದಿಗೆ ಯಾವಾಗಲೂ ಇರುತ್ತದೆ” ಎಂದು ಭಾವುಕರಾಗಿ ನುಡಿದರು.
ಮುಂದುವರಿದು ಮಾತನಾಡಿದ ಅವರು, “ನಾನು ಇನ್ನು ಹೆಚ್ಚು ಎಚ್ಚರಿಕೆಯಿಂದ ಇರಬೇಕಿತ್ತು. ಸೆಟ್ನಲ್ಲಿ ಧ್ವನಿ ಎತ್ತಬೇಕಿತ್ತು. ಆ ಪಾತ್ರದಲ್ಲಿ ಅತಿಯಾದ ವಸ್ತುವಿಕರಣ ಮತ್ತು ಅನುಮತಿಯಿಲ್ಲದ ದೃಶ್ಯಗಳಿದ್ದದ್ದು ನಿಜ. ಸೌತ್ ಸಿನಿಮಾಗಳಲ್ಲಿ ಮುಂಚಿತವಾಗಿಯೇ ಪೂರ್ಣ ಪ್ರಮಾಣದ ಸ್ಕ್ರಿಪ್ಟ್ ಸಿಗುವುದು ವಿರಳ ಮತ್ತು ಕ್ಯಾಮೆರಾ ಆಂಗಲ್ ಹೇಗಿರುತ್ತದೆ ಎಂಬುದು ತಿಳಿಯುವುದಿಲ್ಲ. ನಿರ್ದೇಶಕರು ಹೇಳಿದಂತೆ ಕೇಳುವುದು ನಟರ ಕರ್ತವ್ಯ ಎಂಬ ಭಾವನೆ ನನ್ನಲ್ಲಿತ್ತು. ಆದರೆ ನನಗೆ ಸಿಕ್ಕ ಪ್ರಿವಿಲೇಜ್ ಅನ್ನು ಬಳಸಿಕೊಂಡು ನಾನು ಆ ದೃಶ್ಯಗಳನ್ನು ವಿರೋಧಿಸಬೇಕಿತ್ತು. ಇನ್ನು ಮುಂದೆ ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವುದೊಂದೇ ನನ್ನ ಮುಂದಿರುವ ಹಾದಿ” ಎಂದು ಸ್ಪಷ್ಟಪಡಿಸಿದ್ದಾರೆ.
ಜಾನ್ವಿ ಅವರ ಈ ಪ್ರಾಮಾಣಿಕ ಒಪ್ಪಿಗೆ ಹಾಗೂ ಸ್ವಯಂ ವಿಮರ್ಶೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.



