October 29, 2026
Thursday, October 29, 2026
spot_img

ಪಿಯುಸಿ ಪಾಸಾಗೋದಕ್ಕೆ 13 ವರ್ಷ ತೆಗೆದುಕೊಂಡಿದ್ದ ವ್ಯಕ್ತಿ VAO ಪರೀಕ್ಷೆಯಲ್ಲಿ ಜಿಲ್ಲೆಗೇ ಫಸ್ಟ್‌! ಏನಿದು ಸ್ಕ್ಯಾಮ್‌ ಸ್ಟೋರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಿಯುಸಿ ಪರೀಕ್ಷೆಯನ್ನು ಪಾಸ್‌ ಮಾಡಲು ಬರೋಬ್ಬರಿ 13 ವರ್ಷ ತೆಗೆದುಕೊಂಡಿರುವ ವ್ಯಕ್ತಿಯೊಬ್ಬರು ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗೆ ಫಸ್ಟ್‌ ಬಂದಿದ್ದಾರೆ!

ಕಷ್ಟಪಟ್ಟು ಓದಿ ಫಸ್ಟ್‌ ಬಂದಿರೋದಕ್ಕೆ ಬರೆಯುತ್ತಿರುವ ಪಾಸಿಟಿವ್‌ ಸುದ್ದಿ ಇದು ಎಂದುಕೊಳ್ಳಬೇಡಿ! ವಿಷಯ ಬೇರೆಯೇ ಇದೆ. ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವ ಶಂಕರ ಬನ್ನೂರು ಎಂಬ ಅಭ್ಯರ್ಥಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹಾವೇರಿ ಜಿಲ್ಲಾಢಳಿತಕ್ಕೆ ಸೂಚನೆ ನೀಡಿದೆ.

ಅನುಮಾನಕ್ಕೆ ಕಾರಣ ಏನು?

ಹಾನಗಲ್‌ ಮೂಲದ ಶಂಕರ ಬನ್ನೂರು ಎಂಬ ಅಭ್ಯರ್ಥಿ ಇದೇ ಅ. ನಾಲ್ಕರಂದು ಶಿಗ್ಗಾಂವಿಯ ಪರೀಕ್ಷಾ ಕೇಂದ್ರದಲ್ಲಿ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆ ಒಟ್ಟಾರೆ 200 ಅಂಕಗಳಿಗೆ ನಡೆಯುತ್ತದೆ. 200ಕ್ಕೆ ಶಂಕರ ಅವರು 151 ಅಂಕಗಳನ್ನು ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಈ ಪರೀಕ್ಷೆಗೂ ಮುನ್ನ ಇದೇ ಅಭ್ಯರ್ಥಿ ಕೆಎಸ್‌ಆರ್‌ಪಿ ಕಾನ್ಸ್‌ಟೆಬಲ್‌ ಪರೀಕ್ಷೆಯನ್ನು ಅಟೆಂಡ್‌ ಮಾಡಿದ್ದರು. 100 ಅಂಕಗಳಿಗೆ ನಡೆದ ಈ ಪರೀಕ್ಷೆಯಲ್ಲಿ ಶಂಕರ ಕೇವಲ 25 ಅಂಕಗಳನ್ನು ಪಡೆದಿದ್ದು ಅನುಮಾನಕ್ಕೆ ಕಾರಣವಾಗಿದೆ. ಇದರ ಜೊತೆಗೆ ಪಿಯುಸಿ ಓದಿ ಮುಗಿಸಲು 13 ವರ್ಷ ತೆಗೆದುಕೊಂಡಿದ್ದು ಹೈಲೈಟ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹದ ಅಫೀಶಿಯಲ್‌ ಎನ್ನುವ ಟ್ವಿಟರ್‌ ಪೇಜ್‌ನಲ್ಲಿ ಕರ್ನಾಟಕದ ಕೆಇಎನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಇದೇ ಅಭ್ಯರ್ಥಿ ಒಂದುವರೆ ವರ್ಷದ ಹಿಂದೆ ಶೇ.49 % ಅಂಕಗಳೊಂದಿಗೆ ಪಿಯುಸಿ ಪಾಸ್‌ ಆಗಿದ್ದಾರೆ. ಪಿಸಿ ಕೆಎಸ್‌ಆರ್‌ಪಿ ಪರೀಕ್ಷೆಯಲ್ಲಿ ಕೇವಲ 25 ಅಂಕ ಗಳಿಸಿದ್ದಾರೆ. ಆದರೆ ಅದಕ್ಕಿಂತ ಕಠಿಣ ಪರೀಕ್ಷೆಯಾದ ವಿಎಒನಲ್ಲಿ 151 ಅಂಕಗಳನ್ನು ಗಳಿಸೋದಕ್ಕೆ ಹೇಗೆ ಸಾಧ್ಯ? ನಮ್ಮ ತಂಡದಿಂದ ಇನ್ನಷ್ಟು ಕೂಲಂಕಷ ಪರಿಶೀಲನೆ ನಡೆಸಿ ಘಟನೆ ನಿಜ ಎಂದಾದರೆ ಎಫ್‌ಐಆರ್‌ ದಾಖಲಿಸಲಾಗುತ್ತದೆ ಜೊತೆಗೆ ಕೆಇಎ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಕೆಇಎ ಕಾರ್ಯನಿರ್ವಾಹಕರು ಹೇಳೋದೇನು?

ಬಯೋಮೆಟ್ರಿಕ್‌ ಹಾಗೂ ಫೇಸ್‌ ರೆಕಗ್ನೀಷನ್‌ ಗುರುತಿಸುವ ತಂತ್ರಜ್ಞಾನದ ಪ್ರಕಾರ ಈ ಅಭ್ಯರ್ಥಿಯೇ ಪರೀಕ್ಷೆ ಹಾಲ್‌ಗೆ ಬಂದು ಪರೀಕ್ಷೆ ಬರೆದಿರುವುದು ನಿಜ. ಅ. ನಾಲ್ಕರಂದು ನಡೆದ ಪರೀಕ್ಷೆಯ ಒಎಂಆರ್‌ ಶೀಟ್‌ಗಳನ್ನು ಅಕ್ಟೋಬರ್‌ ಐದರಂದು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಒಳಗೆ ಯಾವುದೇ ಅಕ್ರಮ ನಡೆದಿಲ್ಲ. ಶಿಗ್ಗಾಂವಿಯ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ವರದಿ ನೀಡಿ ಎಂದು ಹಾವೇರಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಹೇಳಿದ್ದಾರೆ. ಇದರಲ್ಲಿ ಯಾವುದೇ ಅಕ್ರಮ ಪತ್ತೆಯಾದರೂ ದೂರು ದಾಖಲಿಸಲಾಗುತ್ತದೆ ಎಂದಿದ್ದಾರೆ.

Must Read