October 30, 2026
Friday, October 30, 2026
spot_img

ಯುದ್ಧಕ್ಕೆ ಮೂಲ ಕಾರಣವೇ ಆಕೆ: ರಾಮಾಯಣದ ‘ಶೂರ್ಪನಖಿ’ ಪಾತ್ರದ ಬಗ್ಗೆ ರಕುಲ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ಸಿನಿಮಾ ‘ರಾಮಾಯಣ’ದ ಮೊದಲ ಟ್ರೇಲರ್ ಬಿಡುಗಡೆಯಾಗಿ ಈಗಾಗಲೇ ಇಡೀ ದೇಶಾದ್ಯಂತ ಹೊಸ ಸಂಚಲನ ಸೃಷ್ಟಿಸಿದೆ. ಶ್ರೀರಾಮನಾಗಿ ರಣಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ಅವರ ನೋಟ ಅಭಿಮಾನಿಗಳ ಮನ ಗೆದ್ದಿದೆ. ಆದರೆ, ಈ ಟ್ರೇಲರ್‌ನಲ್ಲಿ ಪ್ರೇಕ್ಷಕರಿಗೆ ಕಾದಿದ್ದ ಅತಿ ದೊಡ್ಡ ಅಚ್ಚರಿ ಎಂದರೆ ಅದು ನಟಿ ರಕುಲ್ ಪ್ರೀತ್ ಸಿಂಗ್ ಅವರ ‘ಶೂರ್ಪನಖಿ’ ಅವತಾರ.

ಈ ಬಗ್ಗೆ ಮಾತನಾಡಿರುವ ರಕುಲ್, ಈ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. “ಈ ಚಿತ್ರವು ಭಾರತದ ನೈಜ ಇತಿಹಾಸ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ. ಎರಡನೆಯದಾಗಿ, ಶೂರ್ಪನಖಿಯದ್ದು ಕೇವಲ ನಕಾರಾತ್ಮಕ ಪಾತ್ರವಲ್ಲ. ಆಕೆ ಹಲವು ಭಾವನೆಗಳಿರುವ ಸಂಕೀರ್ಣ ಪಾತ್ರ. ಇಡೀ ರಾಮಾಯಣದ ಮಹಾಯುದ್ಧಕ್ಕೆ ಮೂಲ ಕಾರಣವೇ ಶೂರ್ಪಣಖಿ. ಇಂತಹ ಭಿನ್ನವಾದ ಪಾತ್ರದಲ್ಲಿ ನಟಿಸುವುದು ಒಬ್ಬ ನಟಿಯಾಗಿ ನನಗೆ ದೊಡ್ಡ ಸವಾಲು ಮತ್ತು ರೋಮಾಂಚನ ನೀಡಿದೆ” ಎಂದು ಹೇಳಿದ್ದಾರೆ.

ಈ ಮುನ್ನ ಅಭಿಮಾನಿಯೊಬ್ಬರು ಬರೆದಿದ್ದ ಸುಂದರ ಪತ್ರವನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಮರುಹಂಚಿಕೊಂಡಿದ್ದ ರಕುಲ್, “ಚರಿತ್ರೆ ಎಂದು ಬಂದಾಗ ಜನರು ಶೂರ್ಪನಖಿಯನ್ನು ಒಂದೇ ಒಂದು ಘಟನೆಯಿಂದ ನೆನಪಿಟ್ಟುಕೊಳ್ಳುತ್ತಾರೆ. ಆದರೆ ಆಕೆಯ ಕಥೆಯ ಹಿಂದೆ ಯಾರಿಗೂ ತಿಳಿಯದ ಅನೇಕ ಮುಖಗಳಿವೆ. ಪ್ರೇಕ್ಷಕರು ಯಾವುದೇ ಮುಜುಗರವಿಲ್ಲದೆ, ಮುಕ್ತ ಮನಸ್ಸಿನಿಂದ ಈ ಪಾತ್ರವನ್ನು ಸ್ವೀಕರಿಸುತ್ತಾರೆ ಎಂಬ ಭರವಸೆ ನನಗಿದೆ” ಎಂದು ಬರೆದುಕೊಂಡಿದ್ದರು.

ಒಟ್ಟಿನಲ್ಲಿ, ರಾಮಾಯಣದಂತಹ ಮಹಾಕಾವ್ಯದಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಅವರು ಶೂರ್ಪನಖಿಯಾಗಿ ಹೇಗೆ ಮೂಡಿಬರಲಿದ್ದಾರೆ ಮತ್ತು ತೆರೆಯ ಮೇಲೆ ಯಾವ ರೀತಿಯ ಮೋಡಿ ಮಾಡಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Must Read

Skip to toolbar