ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಿದ ‘ಅರ್ನಬ್’ ಚಂಡಮಾರುತದ ಪರಿಣಾಮವಾಗಿ ನೆರೆಯ ಛತ್ತೀಸ್ಗಢದ ಕೆಲವೆಡೆ ಆಕಾಶ ದಿಢೀರನೆ ರಕ್ತದಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ದಂತೇವಾಡ ಹಾಗೂ ಕಿರಂಡೂಲ್ ಸೇರಿದಂತೆ ಹಲವು ಭಾಗಗಳಲ್ಲಿ ಕಂಡುಬಂದ ಈ ಅಪರೂಪದ ದೃಶ್ಯವು ಜನರಲ್ಲಿ ತೀವ್ರ ಆಶ್ಚರ್ಯ ಮತ್ತು ಕೌತುಕವನ್ನು ಮೂಡಿಸಿದೆ.
ಚಂಡಮಾರುತದ ಪ್ರಭಾವದಿಂದ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುತ್ತಿರುವ ನಡುವೆಯೇ ಈ ವಿಸ್ಮಯಕಾರಿ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ಈ ವಿಚಿತ್ರ ಬಣ್ಣಕ್ಕೆ ನಿರ್ದಿಷ್ಟ ಕಾರಣ ಇನ್ನು ಅಧಿಕೃತವಾಗಿ ಖಚಿತವಾಗಿಲ್ಲವಾದರೂ, ವಿಜ್ಞಾನಿಗಳು ಹಾಗೂ ಹವಾಮಾನ ತಜ್ಞರು ಕೆಲವು ಸಾಧ್ಯತೆಗಳನ್ನು ವ್ಯಕ್ತಪಡಿಸಿದ್ದಾರೆ. ಚಂಡಮಾರುತದ ತೀವ್ರ ಗಾಳಿಗೆ ಕೆಂಪು ಮಣ್ಣಿನ ಕಣಗಳು ಮತ್ತು ಧೂಳು ಗಾಳಿಯಲ್ಲಿ ಎತ್ತರಕ್ಕೆ ತೇಲಿಹೋಗಿ ವಾತಾವರಣದಲ್ಲಿ ಹರಡಿಕೊಂಡಾಗ ಆಕಾಶ ಈ ರೀತಿ ಕೆಂಪಾಗಿ ಕಾಣುವ ಸಾಧ್ಯತೆಯಿದೆ.
ಇನ್ನೊಂದು ಪ್ರಮುಖ ಕಾರಣವೆಂದರೆ ಸೂರ್ಯನ ಬೆಳಕಿನ ಚದುರುವಿಕೆ. ವಾತಾವರಣದಲ್ಲಿ ಮೋಡ, ತೇವಾಂಶ ಮತ್ತು ಧೂಳಿನ ಕಣಗಳು ಹೆಚ್ಚಿದ್ದಾಗ ಸೂರ್ಯನ ನೀಲಿ ಬಣ್ಣದ ಕಿರಣಗಳು ಚದುರಿಹೋಗಿ, ಉದ್ದನೆಯ ತರಂಗಾಂತರ ಹೊಂದಿರುವ ಕೆಂಪು ಮತ್ತು ಕಿತ್ತಳೆ ಬಣ್ಣದ ಬೆಳಕು ಮಾತ್ರ ಪ್ರಮುಖವಾಗಿ ಕಣ್ಣಿಗೆ ಕಾಣಿಸುತ್ತದೆ. ಈ ಪ್ರಕ್ರಿಯೆಯನ್ನು ‘ರೇಲೀ ಸ್ಕ್ಯಾಟರಿಂಗ್’ ಎನ್ನಲಾಗುತ್ತದೆ.
ಸ್ಥಳೀಯ ಹವಾಮಾನ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿದ ನಂತರವೇ ಈ ಘಟನೆಗೆ ನಿಖರ ಕಾರಣ ಏನೆಂದು ಹೇಳಲು ಸಾಧ್ಯ ಎಂದು ತಜ್ಞರು ತಿಳಿಸಿದ್ದಾರೆ. ಆಕಾಶದ ಬಣ್ಣವು ಜನರಲ್ಲಿ ಕುತೂಹಲ ಮೂಡಿಸಿದ್ದರೂ, ಸ್ಥಳೀಯ ಆಡಳಿತವು ಜನರಿಗೆ ಚಂಡಮಾರುತದ ಭೀತಿಯಿಂದಾಗಿ ಸುರಕ್ಷಿತವಾಗಿರಲು ಹಾಗೂ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸೂಚಿಸಿದೆ.



