ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಆರು ಮಂದಿಯಿದ್ದ ಹೆಲಿಕಾಪ್ಟರ್ ಪತನಗೊಂಡಿದೆ.
ಟ್ರಾನ್ಸ್‌ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿದ್ದು, ಹೆಲಿಕಾಪ್ಟರ್ನಲ್ಲಿ 6 ಮಂದಿ ಇದ್ದರು ಎನ್ನಲಾಗಿದೆ. ಹೆಲಿಕಾಪ್ಟರ್ ಬದರಿನಾಥ ಧಾಮದಿಂದ ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಚಾಯ್ ಮತ್ತು ಥಾಯಾಂಗ್ ಗ್ರಾಮಗಳ ಸಮೀಪ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಕೆಟ್ಟ ಹವಾಮಾನ ಮತ್ತು ಕಡಿಮೆ ಗೋಚರತೆ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಅಪಘಾತದ ನಿಖರ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಪೊಲೀಸರು, ಜಿಲ್ಲಾಡಳಿತ ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆಗೆ ಇಳಿದಾಗ ಆರು ಮಂದಿಯೂ ಮೃತಪಟ್ಟಿರುವ ಮಾಹಿತಿ ದೊರೆತಿದೆ. ಉತ್ತರಾಖಂಡದ ಚಾರ್‌ಧಾಮ್ ಯಾತ್ರೆಯ ಸಂದರ್ಭದಲ್ಲಿ ಹೆಲಿಕಾಪ್ಟರ್ ಸೇವೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ಬದರಿನಾಥ, ಕೇದಾರನಾಥ ಸೇರಿದಂತೆ ಎತ್ತರದ ಪರ್ವತ ಪ್ರದೇಶಗಳಿಗೆ ತೆರಳುವ ಯಾತ್ರಿಕರಿಗೆ ಈ ಸೇವೆಗಳು ಅನುಕೂಲಕರವಾಗಿವೆ. ಆದರೆ ಪರ್ವತ ಪ್ರದೇಶಗಳಲ್ಲಿ ಹವಾಮಾನ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ದಟ್ಟ ಮೋಡ, ಮಳೆ, ಮಂಜು ಮತ್ತು ಕಡಿಮೆ ಗೋಚರತೆಯಿಂದ ಹೆಲಿಕಾಪ್ಟರ್‌ಗಳ ಹಾರಾಟ ಅಪಾಯಕಾರಿಯಾಗಬಹುದು.



